

ಸಿಂಧನೂರು: ನಗರದಲ್ಲಿ ನಡೆಯುವ ದಸರಾ ಉತ್ಸವದಲ್ಲಿ ಅನ್ಯಧರ್ಮದ ಸ್ತಬ್ಧಚಿತ್ರ ಮೆರವಣಿಗೆ ವಿರೋಧಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳದಿಂದ ಉಪತಹಸೀಲ್ದಾರ್ ಚಂದ್ರಶೇಖರರಿಗೆ ಗುರುವಾರ ಮನವಿ ಸಲ್ಲಿಸಿತು.
2024ರ ಸಿಂಧನೂರು ದಸರಾ ಉತ್ಸವದಲ್ಲಿ ಅನ್ಯಧರ್ಮದ ಮೆಕ್ಕಾಮದಿನದ ಸ್ತಬ್ಧಚಿತ್ರ ಮೆರವಣಿಗೆ ಮಾಡಿ ಹಿಂದುಗಳ ಧಾರ್ಮಿಕ ಶ್ರದ್ಧೆಯನ್ನು ಹಾಳು ಮಾಡಿದ್ದು ಆದರೂ, ಹಿಂದುಗಳು ಸಹಿಷ್ಣು ಹೃದಯದವರು. ನವರಾತ್ರಿ ಉತ್ಸವವು ಹಿಂದುಗಳ ಪವಿತ್ರ ಆಚರಣೆಗಳಲ್ಲೊಂದಾಗಿದೆ. ನವರಾತ್ರಿ ಉತ್ಸವ ಸಂತರು, ಮಹಾಂತರ, ಶರಣರ ಸಮ್ಮುಖದಲ್ಲಿ ಅವರ ಮಾರ್ಗದರ್ಶನದೊಂದಿಗೆ ನಡೆಯಬೇಕು. ಅದನ್ನು ಬಿಟ್ಟು ಕೆಲವರು ರಾಜಕೀಯ ಬೇಳೆ ಬೆಳೆಸಿಕೊಳ್ಳಲು ನವರಾತ್ರಿ ಉತ್ಸವದಲ್ಲಿ ಮೆಕ್ಕಾಮದಿನದ ಸ್ತಬ್ಧಚಿತ್ರಗಳ ಮೆರವಣಿಗೆ ಮಾಡಿರುವುದು ಅಕ್ಷಮ್ಯ ಹಿಂದು ವಿರೋಧಿ ನಡೆಯಾಗಿದೆ.
ಈ ಬಾರಿಯೂ ಸಿಂಧನೂರಿನಲ್ಲಿ ದಸರಾ ಉತ್ಸವ ಆಚರಣೆಗೆ ಸಿದ್ಧತೆ ನಡೆಯುತ್ತಿದ್ದು ತಾಲೂಕು ಆಡಳಿತದ ಸಮಕ್ಷಮದಲ್ಲಿ ಕಾರ್ಯಕ್ರಮ ನಡೆಯುವುದರಿಂದ ದಸರಾ ಹಬ್ಬವು ಹಿಂದುಗಳ ಶ್ರದ್ಧೆಯ ಹಬ್ಬವಾಗಿದೆ. ಅನ್ಯ ಧರ್ಮದ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸದಂತೆ ಕ್ರಮಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯಿಸಿದರೆ, ಮುಂದೆ ನಡೆಯುವ ಹೋರಾಟಕ್ಕೆ ನೀವೇ ಕಾರಣವಾಗಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದರು. ವಿಶ್ವ ಹಿಂದು ಪರಿಷತ್ ಬಜರಂಗದಳದ ಬಸವರಾಜ ಸಾಲಗುಂದ, ನಾಗೇಶ ಪವಾರ್, ಮನೋಹರ ಹಿರೇಮಠ, ಎಸ್‌ಆರ್‌ಕೆ ಶಿವಕುಮಾರ, ಸಿದ್ದಲಿಂಗಯ್ಯಸ್ವಾಮಿ, ಅಕ್ಷಯಗೌಡ, ವೀರೇಶ ನಾಯಕ, ಶ್ರೀನಿವಾಸ ಉಪ್ಪಾರ, ರವಿಕುಮಾರ ಇದ್ದರು.