

ವಿಟ್ಲ: ಮಹಾಲಿಂಗೇಶ್ವರ ವಿಶ್ವದ ಆದಿಗುರು, ಶಿವನು ಎಲ್ಲವೂ ಆಗಿದ್ದು ಅವನದ್ದು ಏನೂ ಇಲ್ಲದಂತೆ ಇದ್ದಾನೆ. ಶಿವನ ಅರ್ಧಭಾಗ ವಿಷ್ಣುವಿನಲ್ಲಿ ಲೀನವಾಗಿದ್ದರೆ, ಇನ್ನರ್ಧ ಭಾಗ ಪಾರ್ವತಿಯಲ್ಲಿ ಲೀನವಾಗಿದೆ. ಆದ್ಯಂತ ರಹಿತ, ವೈರಾಗ್ಯಮೂರ್ತಿಯಾದ ಶಿವನ ಸೇವೆ ಮಂಗಳಕರ. ನಮ್ಮೊಳಗೆ ಶಿವನಿದ್ದಾಗ ಲೋಕವೇ ಮಂಗಳಕರವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ಅನುಜ್ಞಾ ಕಲಶದ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ವಿಜ್ಞಾಪನ ಪತ್ರವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಮಾತನಾಡಿ, ಕಾರ್ಯಕರ್ತರ ತೊಡಗುವಿಕೆ, ಸಾಮೂಹಿಕ, ಸಂಘಟಿತ ಪ್ರಯತ್ನದೊಂದಿಗೆ ಎಲ್ಲರ ಸಹಕಾರದಿಂದ ಜೀಣೋದ್ಧಾರ ಕಾರ್ಯ ಶೀಘ್ರವಾಗಿ ಕೈಗೂಡಲು ನಾವೆಲ್ಲರೂ ದೃಢಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.
ಮಂಗಳೂರಿನ ಹಿರಿಯ ವಕೀಲ ಎಸ್. ಎಂ. ಭಟ್, ನೇಪಾಳದ ಪಶುಪತಿನಾಥ ದೇವಸ್ಥಾನದ ನಿವೃತ್ತ ಅರ್ಚಕ ಪದ್ಯಾಣ ರಘುರಾಮ ಕಾರಂತ, ಗೌರವಾಧ್ಯಕ್ಷರಾದ ಪದ್ಯಾಣ ತಿಮ್ಮಣ್ಣ ಭಟ್, ಅಧ್ಯಕ್ಷ ಅರವಿಂದ ಪದ್ಯಾಣ ಉಪಸ್ಥಿತರಿದ್ದರು.
ದೀಪಶ್ರೀ ಮತ್ತು ವೈಷ್ಣವಿ ಪ್ರಾರ್ಥಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ ಸ್ವಾಗತಿಸಿ ಪ್ರಸ್ತಾವನೆಗೈದರು. ಶ್ರೀನಿವಾಸ ಭಟ್ ಸೇರಾಜೆ ವಂದಿಸಿದರು. ಪ್ರತೀಕ್ಷಾ ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು.