ಪಡುವರಿಯಲ್ಲಿ ನಾಡದೋಣಿ ದುರಂತ; ದೋಣಿ ಮಾಲೀಕ ಸಾವು, ಮತ್ತೊಬ್ಬ ಕಣ್ಮರೆ

byn--web
Published on

ಬೈಂದೂರು: ಪಡುವರಿ ಗ್ರಾಮದ ತಾರಾಪತಿಯಲ್ಲಿ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮಗುಚಿ ಇಬ್ಬರು ಮೀನುಗಾರರು ಸಮುದ್ರದಲ್ಲಿ ಕಣ್ಮರೆಯಾಗಿದ್ದು, ಓರ್ವನ ಮೃತದೇಹ ಶನಿವಾರ ಬೆಳಗ್ಗೆ ಅಮ್ಮನವರತೊಪ್ಲು ಬಳಿಯ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.

ಶುಕ್ರವಾರ ಸಾಯಂಕಾಲ ಜೈಗುರೂಜಿ ಎಂಬ ನಾಡದೋಣಿ ಮೀನುಗಾರಿಕೆ ಮುಗಿಸಿ ಹಿಂತಿರುಗುವಾಗ ಅಳ್ವೆಕೋಡಿ ಬಳಿ ಅಲೆಗಳ ಹೊಡೆತಕ್ಕೆ ಸಿಕ್ಕಿ ಮಗುಚಿ ಬಿದ್ದಿದ್ದು, ದೋಣಿಯಲ್ಲಿದ್ದ ಏಳು ಜನರ ಪೈಕಿ ಇಬ್ಬರು ಕಣ್ಮರೆಯಾಗಿದ್ದರು. ದೋಣಿಯಲ್ಲಿದ್ದ ವಿಜೇತ್, ಪ್ರವೀಣ್, ಸಚಿನ್, ಸುಮಂತ್, ವಾಸುದೇವ ಖಾರ್ವಿ ಎಂಬುವರನ್ನು ಕರಾವಳಿ ಕಾವಲು ಪಡೆ ಪೊಲೀಸರು ಮತ್ತು ಸ್ಥಳೀಯರು ಒಟ್ಟಾಗಿ ಇನ್ನೊಂದು ದೋಣಿಯ ಸಹಾಯದಿಂದ ಸುರಕ್ಷಿತವಾಗಿ ದಡಕ್ಕೆ ತಂದಿದ್ದಾರೆ.

ದೋಣಿಯ ಮಾಲೀಕ ಚರಣ್ (25) ಎಂಬುವರ ಶವ ಭಾನುವಾರ ಬೆಳಗ್ಗೆ ಅಮ್ಮನವರತೊಪ್ಲು ಬಳಿಯ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಇನ್ನೊಬ್ಬ ಮೀನುಗಾರ ಅಣ್ಣಪ್ಪ ಖಾರ್ವಿಯ (40) ಶೋಧ ಕಾರ್ಯ ಮುಂದುವರಿದಿದೆ.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸುಕುಮಾರ ಶೆಟ್ಟಿ ಮೃತ ಮೀನುಗಾರರ ಕುಟುಂಬಕ್ಕೆ ಸರ್ಕಾರದ ವತಿಯಿಂದ 6 ಲಕ್ಷ ರೂ. ಹಾಗೂ ವೈಯಕ್ತಿಕವಾಗಿ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net