ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ

gurupura
Published on

ಗುರುಪುರ: ಪಡುಪೆರಾರ ಪಂಚಾಯಿತಿ 2022-23ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಬುಧವಾರ ಅಧ್ಯಕ್ಷೆ ಅಮಿತಾ ಎಂ. ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿತು.

ಪಂಚಾಯಿತಿ ಆಡಳಿತ ವರದಿಯಲ್ಲಿ ಉಳಿಕೆ ಮೊತ್ತದ ಬಗ್ಗೆ ಪ್ರಸ್ತಾವಿಸಲಾಗಿದ್ದು, ಈ ಬಗ್ಗೆ ಗ್ರಾಮಸ್ಥ ರೊನಾಲ್ಡ್ ಪ್ರಶ್ನಿಸಿ, ‘ಅಭಿವೃದ್ಧಿ ಕಾರ್ಯಗಳಿಗೆ ವಿವಿಧ ಇಲಾಖೆಗಳಿಂದ ಮಂಜೂರಾದ ಮೊತ್ತ ಸರಿಯಾಗಿ ಬಳಕೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿರುವ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಪಂಚಾಯಿತಿ ಘನತ್ಯಾಜ್ಯ ಘಟಕ ಸ್ಥಾಪಿಸಲು ಮುಂದಾಗಿದ್ದು, ಇದಕ್ಕೆ ಗ್ರಾಮಸ್ಥರೆಲ್ಲರ ಸಹಕಾರ ಅಗತ್ಯವಿದೆ. ಸಾರ್ವಜನಿಕ ಶೌಚಗೃಹ ಅಭಿವೃದ್ಧಿಪಡಿಸಲಾಗುವುದು. ನೀರಿನ ಕರ ಮತ್ತು ಇತರ ತೆರಿಗೆ ಶೇ 90ರಷ್ಟು ವಸೂಲಿಗೆ ಪಂಚಾಯಿತಿ ಆಡಳಿತ ಶ್ರಮಿಸುತ್ತಿದೆ ಎಂದು ಪಿಡಿಒ ಉಗ್ಗಪ್ಪ ಮೂಲ್ಯ ತಿಳಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಯಾವುದೇ ಕಾಮಗಾರಿಯೂ ಕ್ರಿಯಾಯೋಜನೆ ಪ್ರಕಾರ ನಡೆದಿಲ್ಲ. ಅವ್ಯವಹಾರ ನಡೆದಿರುವ ಬಗ್ಗೆ ಸಂದೇಹಗಳಿವೆ ಎಂದು ರೋಶನ್ ಆರೋಪಿಸಿದಾಗ, ಕಾಮಗಾರಿಗಳ ಬಗ್ಗೆ ಸದೇಹ ಬೇಡ. ಎಲ್ಲವೂ ಪಾರದರ್ಶಕವಾಗಿ ನಡೆದಿವೆ ಎಂದು ಪಂಚಾಯತ್‌ರಾಜ್ ಕಿರಿಯ ಇಂಜಿನಿಯರ್ ವಿಶ್ವನಾಥ ಹೇಳಿದರು.

ಪಂಚಾಯಿತಿ ವ್ಯಾಪ್ತಿಯ ಕತ್ತಲ್‌ಸಾರ್, ವರಕಲ ಮತ್ತು ಮೂಡುಪೆರಾರ ಗ್ರಾಮದಲ್ಲಿ ಬಡವರಿಗೆ ಎರಡುವರೆ ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದೆ. ಕೆಲವರಿಗೆ ಹಕ್ಕುಪತ್ರ ನೀಡಲಾಗಿದ್ದರೂ ಉಳಿದವರಿಗೆ ಇನ್ನೂ ನಿವೇಶನ ಗುರುತಿಸಿಕೊಟ್ಟು, ಹಕ್ಕುಪತ್ರ ಒದಗಿಸಿಲ್ಲ ಎಂದು ಗ್ರಾಮಸ್ಥರೊಬ್ಬರು ದೂರಿದರು. ಪಂಚಾಯಿತಿ ಮೂಲಕ ಬಡವರಿಗೆ ಸೂಚಿಸಲಾದ ನಿವೇಶನದಲ್ಲಿ ಮನೆ ನಿರ್ಮಿಸಲು ಹಂತಹಂತವಾಗಿ ಹಕ್ಕುಪತ್ರ ನೀಡಲಾಗುತ್ತದೆ ಎಂದು ಅಧ್ಯಕ್ಷೆ ಅಮಿತಾ ಎಂ. ಶೆಟ್ಟಿ ಹೇಳಿದರು.

ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ: ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಶಾಸಕ ಡಾ.ಭರತ್ ಶೆಟ್ಟಿ ಆದೇಶಪತ್ರ ವಿತರಿಸಿ ಮಾತನಾಡಿ, ಗ್ರಾಮಸ್ಥರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ದೆಸೆಯಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸುವೆ ಎಂದು ಭರವಸೆ ನೀಡಿದರು.

ರಸ್ತೆ, ಬೀದಿದೀಪ, ತೋಡು, ಮೋರಿ ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿ, ಕಾಮಗಾರಿಯಲ್ಲಿ ವ್ಯತ್ಯಯಗಳ ಬಗ್ಗೆ ಗ್ರಾಮಸ್ಥರು ಚರ್ಚಿಸಿದರು. ಉಪಾಧ್ಯಕ್ಷೆ ಸೇಸಮ್ಮ, ಸದಸ್ಯರು, ಕಾರ್ಯದರ್ಶಿ ದೀಪ್ತಿ, ಲೆಕ್ಕಸಹಾಯಕ ನಾಗೇಶ್ ಪೂಜಾರಿ, ಶಿಕ್ಷಣಾಧಿಕಾರಿ ಪ್ರಶಾಂತ್ ಕುಮಾರ್, ಕೈಕಂಬ ಮೆಸ್ಕಾಂ ಲೋಕೇಶ್ ಕೆ.ಟಿ, ಅರಣ್ಯಾಧಿಕಾರಿ ರೋಹಿಣಿ, ಆಹಾರ ನಿರೀಕ್ಷಕ ಪ್ರಕಾಶ್, ಗ್ರಾಮಕರಣಿಕ ಮುತ್ತಪ್ಪ, ಪಶುಸಂಗೋಪನಾ ಇಲಾಖೆಯ ಕೆ.ಜಿ.ಮನೋಹರ, ಮಹಿಳಾ ಮತ್ತು ಮಕ್ಕಳ ಆರೋಗ್ಯ ಇಲಾಖೆ ಮೇಲ್ವಿಚಾರಕಿ ಸುಜಾತಾ, ಮೆಸ್ಕಾಂನ ವೀರಭದ್ರಪ್ಪ, ಅಶೋಕ್ ರೈತ ಸಂಪರ್ಕ ಕೇಂದ್ರದ ಚಿದಂಬರಮೂರ್ತಿ, ವೈದ್ಯಾಧಿಕಾರಿ ಡಾ.ಶಂಕರ್‌ನಾಥ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net