

ಹಳೆಯಂಗಡಿ: ಗ್ರಾಮೀಣ ಜನರ ಶ್ರೇಯೋಭಿವೃದ್ಧಿಗಾಗಿ ಸಂಘವು ಅಸಹಾಯಕರಿಗೆ ಸಹಾಯ ಹಸ್ತ, ವಿದ್ಯಾರ್ಥಿವೇತನ ವಿತರಣೆ, ಕ್ರೀಡೆ, ಕೃಷಿಕರಿಗೆ ಸಾಲ ಸೌಲಭ್ಯ ನೀಡುತ್ತಿದೆ. ಸಂಘದ ಅಭಿವೃದ್ಧಿಗೆ ಮಹತ್ವ ನೀಡುತ್ತಿದ್ದು ಜತೆಗೆ ಸದಸ್ಯರಿಗೆ ಶೇ.19 ಡಿವಿಡೆಂಡ್ ನೀಡಲಿದೆ ಎಂದು ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಹೇಳಿದರು.
ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ನಾರಾಯಣ ಸನಿಲ್ ಸಭಾಭವನದಲ್ಲಿ ಆಯೋಜಿಸಲಾದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು.
ಮುಂದಿನ ದಿನಗಳಲ್ಲಿ ಸಂಘದ ಉಪಶಾಖೆಗಳನ್ನು ಸ್ಥಾಪಿಸುವ ಬಗ್ಗೆ ಹಾಗೂ ಕೃಷಿ ಮಾಹಿತಿ ಶಿಬಿರಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಉಪಾಧ್ಯಕ್ಷೆ ಮೀರಾ ಬಾಯಿ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿಮಕರ್, ನಿರ್ದೇಶಕರಾದ ವಿನೋದ್ ಸಾಲ್ಯಾನ್ ಬೊಳ್ಳೂರು, ಎಚ್.ವಸಂತ್ ಬೆರ್ನಾಡ್, ಧರ್ಮಾನಂದ ಶೆಟ್ಟಿಗಾರ್, ಅಶೋಕ್ ಬಂಗೇರ, ಸೇಸಪ್ಪ ಟಿ.ಸಾಲ್ಯಾನ್, ಸಂಧ್ಯಾ, ಮುಖೇಶ್ ಸುವರ್ಣ, ಶಿವರಾಮ್, ರೋಶನಬಿ, ಧನಂಜಯ, ನಾಮನಿರ್ದೇಶನ ಸದಸ್ಯರಾದ ಹಿಮಕರ ಆರ್.ಪುತ್ರನ್, ರಾಜೇಶ್ ಎಸ್.ದಾಸ್, ಮನೋಜ್ ಮತ್ತು ಆರ್ಥಿಕ ಬ್ಯಾಂಕಿನ ಪ್ರತಿನಿಧಿ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.
ಪೂರ್ವಿಕಾ ಪ್ರಾರ್ಥಿಸಿದರು. ಕಾರ್ಯನಿರ್ವಹಣಾಧಿಕಾರಿ ಹಿಮಕರ್ ಸ್ವಾಗತಿಸಿ ನಿರೂಪಿಸಿದರು. ಜತೆ ಕಾರ್ಯದರ್ಶಿ ಶ್ರೀಕಾಂತಿ ಶೆಟ್ಟಿ ವಂದಿಸಿದರು. ಸದಸ್ಯರಿಗೆ ಶೇ.19 ಡಿವಿಡೆಂಡ್ ವಿತರಿಸಲಾಯಿತು.