ಪಡುಕರೆ ಟ್ಯಾಂಕ್‌ಗಿಲ್ಲ ಉದ್ಘಾಟನೆ ಭಾಗ್ಯ

tank new
Published on

ಕೋಟ: ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕರೆ ಅರಮ ದೇವಸ್ಥಾನ ಸಮೀಪ ಸುಮಾರು 16.75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ ಆರಂಭಗೊಂಡ ವರ್ಷ ಕಳೆದರೂ ಪೂರ್ಣಗೊಂಡು ಉದ್ಘಾಟನೆ ಭಾಗ್ಯ ದೊರಕಿಲ್ಲ. ಅಲ್ಲದೆ ಸಮೀಪದಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಳೇ ಟ್ಯಾಂಕ್‌ಗೂ ಮುಕ್ತಿ ಸಿಕ್ಕಿಲ್ಲ.

ಪ್ರಸ್ತುತ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡು ಹಿಂದಿನ ಪಂಚಾಯಿತಿ ಬೊರ್ಡ್ ಹೊಸ ಟ್ಯಾಂಕ್‌ಗೆ ಕಾಯಕಲ್ಪ ನೀಡಿತು. ಆದರೆ ವರ್ಷ ಕಳೆದರೂ ಹೊಸ ಟ್ಯಾಂಕ್ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಳೇ ಟ್ಯಾಂಕ್ ಶಿಥಿಲಗೊಂಡಿದ್ದು, ಪಕ್ಕದಲ್ಲಿ ಮನೆಗಳಿದ್ದು ಒಂದೊಮ್ಮೆ ನೆಲಕ್ಕೆ ಉರುಳಿದರೆ ಸನಿಹದಲ್ಲಿರುವ ಮನೆಗಳಿಗೆ ಕಂಟಕ ತಪ್ಪಿದ್ದಲ್ಲ.

ಕಾಮಗಾರಿಯಲ್ಲಿ ಲೋಪ?

ಟ್ಯಾಂಕ್ ಕಾಮಗಾರಿಯಲ್ಲಿ ಲೋಪವಾಗಿದೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ. ಕಾಮಗಾರಿಗೆ ಬಳಸಿದ ಕಬ್ಬಿಣದ ಸರಳುಗಳು ಸಾಮಾನ್ಯ ಗೃಹಕ್ಕೆ ಉಪಯೋಗಿಸುವ 10, 12 ಎಂ.ಎಂ ಸರಳುಗಳಾಗಿವೆ. ಈ ಬಗ್ಗೆ ಗಮನ ಸೆಳೆದರೂ ಸ್ಥಳೀಯರ ಮಾತಿಗೆ ಕಿಮ್ಮತ್ತು ಸಿಗಲಿಲ್ಲ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ. ಟ್ಯಾಂಕ್ ನಿರ್ಮಾಣ ಮಾಡಬೇಕಾದರೆ ಸುತ್ತಮುತ್ತ ಮನೆಗಳಿರದ ಸ್ಥಳ ಕಾಯ್ದಿರಿಸಬೇಕು. ಮನೆಗಳಿದ್ದರೂ ಸರ್ಕಾರಿ ನಿಯಮದ ಪ್ರಕಾರ 15 ಮೀಟರ್ ಅಂತರದಲ್ಲಿ ನಿರ್ಮಿಸಬೇಕು. ಇದ್ಯಾವುದೂ ಕೋಟ ಹಾಗೂ ಕೋಟತಟ್ಟು ಕುಡಿಯುವ ನೀರಿನ ಟ್ಯಾಂಕ್‌ಗೆ ಅನ್ವಯಿಸಿಲ್ಲ.

ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಉಪಯೋಗಿಸಿದ ಸರಳುಗಳ ಬಗ್ಗೆ ಅನುಮಾನವಿದೆ. ನಾವು ಅದರ ಕುರಿತು ಎಚ್ಚರಿಸಿದರೂ ಪ್ರಯೋಜನ ಶೂನ್ಯ. ಕಾಮಗಾರಿ ಪ್ರಾರಂಭಗೊಂಡು ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ.

ನಿತಿನ್ ಕಾಂಚನ್, ಪಡುಕರೆ ಸ್ಥಳೀಯರು

ನೀರಿನ ಟ್ಯಾಂಕ್ ಕಾಮಗಾರಿ ವಿಳಂಬ ಕುರಿತಂತೆ ಸಂಬಂಧಪಟ್ಟ ನೀರಾವರಿ ಇಲಾಖೆ ಹಾಗೂ ಇಂಜಿನಿಯರ್‌ಗೆ ಸೂಚನೆ ನೀಡಲಾಗುವುದು. ಅಲ್ಲದೆ ಹಳೇ ಟ್ಯಾಂಕ್ ಕೆಡವಲು ಪ್ರಸ್ತುತ ನೀರಿನ ಬಳಕೆ ಗಮನದಲ್ಲಿರಿಸಿಕೊಂಡು ಹೊಸ ಟ್ಯಾಂಕ್ ಉದ್ಘಾಟನೆಯಾದ ಬಳಿಕ ನೆಲಸಮಕ್ಕೆ ಕ್ರಮಗೈಗೊಳ್ಳಲು ಇಂಜಿನಿಯರ್‌ಗೆ ಸೂಚಿಸಲಾಗಿದೆ.

ಶೈಲಾ ಎಸ್. ಪೂಜಾರಿ, ಕೋಟತಟ್ಟು ಗ್ರಾಪಂ ಅಭಿವೃದ್ಧಿ ಅಧಿಕಾರಿ

ನೀರಿನ ಟ್ಯಾಂಕ್‌ನ ಗುಣಮಟ್ಟ ಉತ್ತಮವಾಗಿ ನಿರ್ಮಾಣ ಮಾಡಲಾಗಿದೆ. ಅದಕ್ಕೆ ಸೂಕ್ತವಾದ ಕಬ್ಬಿಣದ ಸರಳುಗಳನ್ನು ಬಳಸಲಾಗಿದೆ. 1ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಆದ್ದರಿಂದ ಗುಣಮಟ್ಟ ಕಾಯ್ದು ಕಾಮಗಾರಿ ನಡೆಸಲಾಗಿದೆ. ಇನ್ನು 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ.

ಮೋಹನ್ ನಾಯ್ಕ, ಇಂಜಿನಿಯರ್ ಉಡುಪಿ ಜಿಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net