ಎಲ್ಲಿ ನೋಡಿದರಲ್ಲಿ ತ್ಯಾಜ್ಯ ರಾಶಿ !

waste
ನಮ್ಮ ಗ್ರಾಮ ನಮ್ಮ ರಸ್ತೆಯ ನಡ್ಸಾಲು ಮಂಜೊಟ್ಟಿ ಪ್ರದೇಶದ ರಸ್ತೆಯಲ್ಲಿಯೇ ಕಸ ಸುರಿದಿರುವುದು
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಹಸಿ ತ್ಯಾಜ್ಯ ಗೊಬ್ಬರ, ಸ್ಯಾನಿಟರ್ ಪ್ಯಾಡ್ ಬರ್ನಿಂಗ್ ಘಟಕ ಸಹಿತ ಎಲ್ಲ ರೀತಿಯ ವ್ಯವಸ್ಥೆಗಳ ಕಲ್ಪಿಸಿದ್ದರೂ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ಅವರಾಲು ಭಾಗದ ಗ್ರಾಮೀಣ ರಸ್ತೆಯೆಲ್ಲೆಡೆ ತ್ಯಾಜ್ಯಗಳನ್ನು ಸುರಿದು ಹೋಗುವವರಿಗೆ ಇನ್ನೂ ಬಿದ್ದಿಲ್ಲ ಕಡಿವಾಣ.

ಗ್ರಾಮೀಣ ರಸ್ತೆಯಲ್ಲೇ ಗ್ರಾಮಸ್ಥರೂ ಮೂಗು ಮುಚ್ಚಿಕೊಂಡು ನಡೆದಾಡಬೇಕಾದ ಪರಿಸ್ಥಿತಿ ಇದ್ದು, ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಇದಕ್ಕೂ ತನಗೂ ಸಂಬಂಧವೇ ಇಲ್ಲದಂತಿದೆ. ಕಸ, ತ್ಯಾಜ್ಯಗಳ ಎಸೆಯುವವರ ಪತ್ತೆಹಚ್ಚಿ ದಂಡ ವಿಧಿಸಲು ಅವಕಾಶವಿದ್ದು, ಗ್ರಾಪಂ ಆಡಳಿತ ಈ ವಿಚಾರವಾಗಿ ನಿರ್ಲಕ್ಷೃ ವಹಿಸುತ್ತಿರುವುದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮೂರು ಗ್ರಾಮಗಳನ್ನು ಸಂಪರ್ಕಿಸುವ ನಮ್ಮ ಗ್ರಾಮ ನಮ್ಮ ರಸ್ತೆಯ ನಡ್ಸಾಲು ಮಂಜೊಟ್ಟಿ ಪ್ರದೇಶ, ಕಂಚಿನಡ್ಕ ಪೊಲೀಸ್ ವಸತಿಗೃಹ ಸಂಪರ್ಕ ರಸ್ತೆ ಪರಿಸರಗಳಲ್ಲಿ ತ್ಯಾಜ್ಯ ಎಸೆಯುವವರ ಹಾವಳಿ ವಿಪರೀತವಾಗಿದೆ. ಎರ್ಮಾಳು ಕಲ್ಸಂಕ ವ್ಯಾಪ್ತಿಯ ಪಡುಬಿದ್ರಿ ಭಾಗದಲ್ಲೂ ಎಲುಬಿನ ರಾಶಿಯುಳ್ಳ ಮೂಟೆಗಳೇ ಕಾಣಸಿಗುತ್ತಿವೆ. ಇದು ಇಲ್ಲಿನ ಕ್ಯಾಟರಿಂಗ್ ಉದ್ಯಮ ಹಾಗೂ ಕುಕ್ಕುಟೋದ್ಯಮ ನಡೆಸುವವರ ಕೃತ್ಯವಾಗಿದ್ದು, ಇದರ ನಿಯಂತ್ರಣಕ್ಕಾಗಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯಮಿಗಳ ಸಭೆಯನ್ನೂ ಇದುವರೆಗೆ ಕರೆದಿಲ್ಲ. ಪಂಚಾಯಿತಿಯ ನಿರ್ಲಕ್ಷೃ ತ್ಯಾಜ್ಯ ಎಸೆಯುವವರಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.

ಜಂಗಲ್ ಕಟ್ಟಿಂಗ್ ಅವಶ್ಯಕ

ಗ್ರಾಮೀಣ ರಸ್ತೆಗಳಲ್ಲಿ ಆಳೆತ್ತರ ಬೆಳೆದು ನಿಂತಿರುವ ಹಸಿರು ಹುಲ್ಲು ಈಗ ಕಾಡಿನಂತಾಗಿದ್ದು, ರಸ್ತೆಯ ಇಕ್ಕೆಲಗಳನ್ನೇ ಆಕ್ರಮಿಸಿಕೊಂಡಿದೆ. ಈ ನಿಟ್ಟಿನಲ್ಲೂ ಗ್ರಾಪಂ ಅವಶ್ಯಕ ಕಾರ್ಯಕ್ಕೆ ಮುಂದಾಗಬೇಕು. ಈಗಾಗಲೇ ಹುಲ್ಲುಗಳನ್ನು ಕತ್ತರಿಸಿರುವ ಅಬ್ಬೇಡಿ, ಬೊಗ್ಗರ್‌ಲಚ್ಚಿಲ್, ನಡ್ಸಾಲು ರಸ್ತೆಯ ಕೆಲಸ ಕಾರ್ಯಗಳು ಅಸಮರ್ಪಕವಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸಾರ್ವಜನಿಕರೂ ಸ್ವಚ್ಛತೆ ಬಗ್ಗೆ ಪ್ರಜ್ಞೆಯಿಂದ ನಡೆದುಕೊಳ್ಳಬೇಕು. ಹಲವಾರು ಬಾರಿ ಎಚ್ಚರಿಸಿದರೂ ಕೆಲವರು ಇದನ್ನು ಉಡಾಫೆಯಾಗಿಸಿದ್ದಾರೆ. ಸಿಸಿ ಕ್ಯಾಮರಾ ಅಳವಡಿಸಿರುವ ಕಂಚಿನಡ್ಕ ಪರಿಸರದಲ್ಲಿ ದಂಡ ಎಸೆದ ಕಾರಣಕ್ಕೆ ಇಬ್ಬರಿಗೆ ದಂಡ ವಿಧಿಸಲಾಗಿದೆ. ತ್ಯಾಜ್ಯ ಎಸೆದು ಹೋಗುವ ಮಂದಿಯ ಕುರಿತಾಗಿ ಮಾಹಿತಿ ನೀಡಲು ಸಾರ್ವಜನಿಕರೂ ಸಹಕರಿಸಬೇಕು. ಮುಂದೆ ಇತರರಿಗೂ ದಂಡ ವಿಧಿಸುವ ಕುರಿತಾಗಿ ಗ್ರಾಪಂ ಮುಂದಾಗಲಿದೆ. -ಶಶಿಕಲಾ ವೈ. ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net