ಮುಗಿಯದ ಕೆಲಸ ನಿಲ್ಲದ ಸಂಚಕಾರ

road
ಬಿರುಕು ಬಿಟ್ಟು ಹೊಂಡಮಯವಾಗಿರುವ ನಂದಿಕೂರು ರೈಲ್ವೆ ಸೇತುವೆ, ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿ ಇಕ್ಕೆಲಗಳ ಬಸ್ ತಂಗುದಾಣಗಳು ಪೊದೆಗಳಿಂದ ಮುಚ್ಚಿರುವುದು.
Published on

ಹೇಮನಾಥ್ ಪಡುಬಿದ್ರಿ

ನಿರಂತರ ಮಳೆಯಿಂದ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ನಿರ್ವಹಣೆ ವಿಳಂಬವಾಗಿದ್ದು, ವಾಹನ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿರುವುದರ ಜತೆಗೆ ಪಾದಚಾರಿಗಳು ಪ್ರಾಣಭಯದಿಂದ ಓಡಾಡುವಂತಾಗಿದೆ.

ಕೈಗಾರಿಕಾ ಪ್ರದೇಶವಾಗಿ ಬೆಳೆದಿರುವ ನಂದಿಕೂರು, ಎಲ್ಲೂರು, ಇನ್ನ ಸಹಿತ ಕಾರ್ಕಳ ಭಾಗಗಳಿಗೆ ಸಂಪರ್ಕಿಸುವ ಈ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಗಿಡಗಳು ಹೆದ್ದಾರಿಯನ್ನೇ ಆಕ್ರಮಿಸಿದೆ. ಪಡುಬಿದ್ರಿ ಪೇಟೆ ಭಾಗದ ಹೆದ್ದಾರಿಯಲ್ಲಿ ಗಿಡಗಂಟಿಗಳು ಬೆಳೆದು ಸೂಚನಾ ಫಲಕಗಳೇ ಕಾಣದಂತಾಗಿದೆ. ಪರಿಣಾಮ ರಸ್ತೆಗಳ ಸ್ಥಿತಿ ಅರಿಯದೇ ವಾಹನಗಳು ಅಪಘಾತಕ್ಕೊಳಗಾಗುತ್ತಿವೆ.

ಪಡುಬಿದ್ರಿ-ಕಾರ್ಕಳ ರಸ್ತೆ ಸಂಪರ್ಕಿಸಲು ನಂದಿಕೂರು ಬಳಿ ನಿರ್ಮಿಸಿರುವ ಕೊಂಕಣ ರೈಲು ಮೇಲ್ಸೇತುವೆ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಸವಾರರಿಗೆ ಅಪಾಯ ತಂದೊಡ್ಡಿದೆ. ನಂದಿಕೂರು ಸೇತುವೆ ಸಹಿತ ಅಡ್ವೆ ಬೈಲು ಪ್ರದೇಶದಲ್ಲಿ ಡಾಂಬರು ಕಿತ್ತುಹೋಗಿ ಸಂಚಾರ ದುಸ್ತರವಾಗಿದೆ. ಅಡ್ವೆ ಕಿರುಸೇತುವೆ ಇಕ್ಕೆಲಗಳಲ್ಲಿ ಡಾಂಬರು ಬಿರುಕು ಬಿಟ್ಟು, ಸೇತುವೆ ಮಧ್ಯದಲ್ಲಿ ಹೊಂಡಮಯವಾಗಿದೆ.

ಕೆಸರುಮಯಗೊಳ್ಳುವ ರೈಲ್ವೆ ಸೇತುವೆ

ಕೊಂಕಣ ರೈಲ್ವೆ ಇಲಾಖೆ ವ್ಯಾಪ್ತಿಗೆ ಸೇರಿದ ನಂದಿಕೂರು ರೈಲ್ವೆ ಸೇತುವೆ ಅವೈಜ್ಞಾನಿಕ ಕಾಮಗಾರಿಯಿಂದ ಪ್ರತಿ ಮಳೆಗಾಲದಲ್ಲಿಯೂ ಕೆಸರುಮಯವಾಗುತ್ತಿದೆ. ಪ್ರತಿ ಬಾರಿಯೂ ತೇಪೆ ಹಾಕುವ ಕಾರ್ಯವಷ್ಟೇ ನಡೆಯುತ್ತಿದೆ. ಸೇತುವೆ ಕಾಂಕ್ರಿಟ್ ಬಿರುಕುಬಿಟ್ಟಿದ್ದು, ಶಾಶ್ವತ ಪರಿಹಾರ ಇನ್ನೂ ಮರೀಚಿಕೆಯಾಗಿದೆ. ಪಡುಬಿದ್ರಿಯಿಂದ ಕಾಂಜರಕಟ್ಟೆವರೆಗೆ ಹಲವು ಬಸ್ ತಂಗುದಾಣಗಳಿದ್ದು, ಎಲ್ಲವೂ ಹುಲ್ಲಿನ ಪೊದೆಗಳಿಂದ ಆವೃತ್ತವಾಗಿವೆ. ಬಸ್‌ಗಾಗಿ ಜನರು ರಸ್ತೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿಯಿದ್ದು, ಬಸ್‌ಗಳು ಕೂಡ ಸಮರ್ಪಕವಾಗಿ ಗೋಚರಿಸುವುದಿಲ್ಲ. ಅಲ್ಲದೇ ಭಾರಿ ಗಾತ್ರದ ಟ್ರಕ್‌ಗಳು ಅತಿ ವೇಗವಾಗಿ ಇಲ್ಲಿ ಸಂಚರಿಸುತ್ತಿದ್ದು, ಪೊದೆಗಳಿಂದ ಆವೃತ್ತವಾದ ರಸ್ತೆ ಕಾಣದೆ ಅಪಘಾತಕ್ಕೊಳಗಾಗುತ್ತಿವೆ.

ಹೆದ್ದಾರಿಯಲ್ಲಿ ಬೆಳೆದ ಹುಲ್ಲು ಕಟಾವುಗೊಳಿಸುವಂತೆ ಹಾಗೂ ಹೊಂಡ ಮುಚ್ಚುವಂತೆ ಲೋಕೋಪಯೋಗಿ ಇಂಜಿನಿಯರ್ ಗಮನಕ್ಕೆ ತರಲಾಗಿದೆ. ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ನಂದಿಕೂರು ರೈಲ್ವೆ ಸೇತುವೆ ದುರಸ್ತಿ ಕುರಿತು ಸಂಸದರಿಗೆ ಪತ್ರ ಬರೆಯಲಾಗುವುದು. -ಸೌಮ್ಯಲತಾ ಶೆಟ್ಟಿ ಪಲಿಮಾರು ಗ್ರಾಪಂ ಅಧ್ಯಕ್ಷೆ ಪಡುಬಿದ್ರಿಯಿಂದ ಕಾಂಜರಕಟ್ಟೆ ತನಕ 7 ಕಿ.ಮೀ ಹೆದ್ದಾರಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಗಿಡಗಂಟಿಗಳನ್ನು ಶೀಘ್ರ ತೆರವುಗೊಳಿಸಲು ಕ್ರಮ ವಹಿಸಲಾಗುವುದು. ಎರಡೆರಡು ಬಾರಿ ಹೆದ್ದಾರಿ ಹೊಂಡಗಳಿಗೆ ವೆಟ್‌ಮಿಕ್ಸ್ ಹಾಕಿ ಮುಚ್ಚಲಾಗಿದೆ. ಮಳೆ ನಿಂತ ಕೂಡಲೇ ತೇಪೆ ಕಾರ್ಯ ಆರಂಭಿಸಲಾಗುವುದು. ನಂದಿಕೂರು ರೈಲ್ವೇ ಸೇತುವೆ ಕಾಂಕ್ರೀಟ್ ಬಿರುಕುಗೊಂಡ ಕಾರಣ ಪದೇಪದೆ ತೇಪೆ ಹಾಕಿದರೂ ಹೊಂಡ ಕಾಣಿಸಿಕೊಳ್ಳುತ್ತಿದೆ. ರೈಲ್ವೆ ಇಲಾಖೆ ವ್ಯಾಪ್ತಿಗೆ ಸೇರಿದ ಸೇತುವೆ ದುರಸ್ತಿಗೆ ಸಂಸದರಿಗೆ ಪತ್ರ ಬರೆಯುವಂತೆ ಗ್ರಾಪಂಗೆ ತಿಳಿಸಲಾಗಿದೆ. -ಮನೋಜ್ ಅಮೀನ್ ಲೋಕೋಪಯೋಗಿ ಇಲಾಖೆ ಇಂಜಿನಿಯರ್ https://www.vijayavani.net/union-convention https://www.vijayavani.net/aksharayana-writing-parade-ceremony

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net