

ಪಡುಬಿದ್ರಿ: ತೆಂಕ ಎರ್ಮಾಳಿನ ಅಶೋಕ್‌ರಾಜ್ ಎಂಬವರ ಪಟ್ಟ ಜಮೀನಲ್ಲಿ ಗಿರೀಶ್ ಎಂಬವರು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 800 ಮೆಟ್ರಿಕ್ ಟನ್ ಸಿಲಿಕಾನ್ ಮರಳನ್ನು ಕಾಪು ತಹಸೀಲ್ದಾರ್ ಪ್ರತಿಭಾ ಆರ್. ನೇತೃತ್ವದಲ್ಲಿ ಸೋಮವಾರ ಹಠಾತ್ ಕಾರ್ಯಾಚರಣೆ ನಡೆಸಿ ಮುಟ್ಟುಗೋಲು ಹಾಕಲಾಗಿದೆ.
ಅಕ್ರಮವಾಗಿ ಮರಳು ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿದ ತಹಸೀಲ್ದಾರ್, ಅದನ್ನು ಮುಟ್ಟುಗೋಲು ಹಾಕಿ ಕಾನೂನು ಕ್ರಮಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸುಪರ್ದಿಗೆ ವಹಿಸಿದ್ದಾರೆ. ಮುಟ್ಟುಗೋಲು ಹಾಕಿರುವ ಮರಳಿನ ರಾಜಧನ ಮೌಲ್ಯ 80,000 ರೂ. ಎಂದು ಅಂದಾಜಿಸಲಾಗಿದೆ.
ಗಣಿ ಇಲಾಖೆಯ ಕಾಪು ತಾಲೂಕು ಭೂವಿಜ್ಞಾನಿ ಸಂಧ್ಯಾ, ಕಾಪು ಕಂದಾಯ ನಿರೀಕ್ಷಕ ಸುಧೀರ್ ಶೆಟ್ಟಿ ಹಾಗೂ ಗ್ರಾಮಕರಣಿಕ ಶ್ಯಾಮ್ ಸುಂದರ್ ಉಪಸ್ಥಿತರಿದ್ದರು.