ಪಡುಬಿದ್ರಿಯಲ್ಲಿ ಅಪೂರ್ಣ ಹೆದ್ದಾರಿ

highway
Published on

ಹೇಮನಾಥ್ ಪಡುಬಿದ್ರಿ

ಹಲವು ವರ್ಷದ ರಾಜಕೀಯ ಹೋರಾಟದ ಬಳಿಕ ಭೂಸ್ವಾಧೀನಗೊಂಡು ವಿಳಂಬವಾಗಿ ಆರಂಭವಾದ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಐದು ವರ್ಷ ಕಳೆದರೂ ಪಡುಬಿದ್ರಿ ಭಾಗದಲ್ಲಿ ಇನ್ನೂ ಮುಕ್ತಾಯದ ಹಂತ ತಲುಪಿಲ್ಲ. ಎರ್ಮಾಳು ಕಲ್ಸಂಕದಿಂದ ಪಡುಬಿದ್ರಿ ಪೇಟೆವರೆಗೆ ಸುಮಾರು 2 ಕಿಲೋ ಮೀಟರ್ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಂಡಿದ್ದರೂ, ಕಲ್ಸಂಕ ಭಾಗದಲ್ಲಿ ಕಾಮಿನಿ ಹೊಳೆಗೆ ಅಡ್ಡಲಾಗಿ ಎರಡು ವರ್ಷ ಹಿಂದೆ ಪೂರ್ಣವಾಗಬೇಕಿದ್ದ ಸೇತುವೆಯ ಒಂದು ಪಾರ್ಶ್ವ ಅರೆಬರೆಯಾಗಿ ಪೂರ್ಣಗೊಳಿಸಿ ಇತ್ತೀಚೆಗಷ್ಟೇ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇನ್ನೊಂದು ಪಾರ್ಶ್ವದ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಆರಂಭವಾಗಿದೆ. ಪಡುಬಿದ್ರಿ ಪೇಟೆಯಲ್ಲಿ ಹೆದ್ದಾರಿ ಪೂರ್ಣವಾದರೂ ಕೆಲವೆಡೆ ಡಾಂಬರು ಕಿತ್ತು ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಅಪೂರ್ಣ ಸರ್ವೀಸ್ ರಸ್ತೆ: ಪೇಟೆಯಲ್ಲಿ ಸರ್ವೀಸ್ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಒಂದು ಪಾರ್ಶ್ವದಲ್ಲಿ ಜಲ್ಲಿ ಹಾಕಿ ಸರ್ವೀಸ್ ರಸ್ತೆ ಹಾಗೂ ಚರಂಡಿ ನಿರ್ಮಿಸಿ ವರ್ಷ ಕಳೆದರೂ ಡಾಂಬರು ಹಾಕಿಲ್ಲ. ಇನ್ನೊಂದು ಪಾರ್ಶ್ವದಲ್ಲಿ ಸರ್ವೀಸ್ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಅಗೆದು ಹಾಕಲಾಗಿದೆ. ಚರಂಡಿ ಅಪೂರ್ಣ ಕಾಮಗಾರಿಯಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಚರಂಡಿ ನಿರ್ಮಾಣಕ್ಕೆ ಕೆಲ ತಿಂಗಳ ಹಿಂದೆ ಅಗೆದು ಹಾಕಿದ ಪರಿಣಾಮ ಪೇಟೆ ಧೂಳುಮಯವಾಗಿ ಅಂಗಡಿ, ಮಳಿಗೆಗಳ ವ್ಯವಹಾರಕ್ಕೂ ಕುತ್ತು ತಂದಿದೆ.

ಸೂಕ್ತ ಬಸ್ ನಿಲ್ದಾಣವಿಲ್ಲ: ಅಪೂರ್ಣ ಕಾಮಗಾರಿಯಿಂದ ಸೂಕ್ತ ಬಸ್ ನಿಲ್ದಾಣವಿಲ್ಲದೆ ಮಂಗಳೂರು, ಉಡುಪಿ ಹಾಗೂ ಕಾರ್ಕಳ ಕಡೆಗೆ ತೆರಳುವ ಪ್ರಯಾಣಿಕರು ಬಿಸಿಲಿನಲ್ಲಿ ನಿಂತು ಬಸ್ ಕಾಯಬೇಕಿದೆ. ನಿಲ್ದಾಣಕ್ಕಾಗಿ ಜಾಗ ಗುರುತಿಸಿ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆದಾರ ಕಂಪನಿಗೆ ಗ್ರಾಪಂ ಮೂಲಕ ಪ್ರಸ್ತಾವನೆ ಸಲ್ಲಿಸಿ ವರ್ಷ ಕಳೆದರೂ ಅದೂ ಕೈಗೂಡಿಲ್ಲ. ಪಡುಬಿದ್ರಿ ಸಿಎ ಬ್ಯಾಂಕ್ ಮುಂಭಾಗ ಮಂಗಳೂರು ಕಡೆ ಸಂಚಾರಕ್ಕೆ ಬಸ್ ಸಮಯ ಪಾಲಕರು ನಿರ್ಮಿಸಿದ ತಾತ್ಕಾಲಿಕ ಬಸ್ ನಿಲ್ದಾಣವಿದ್ದರೂ, ಸರ್ವೀಸ್ ರಸ್ತೆ ಅಪೂರ್ಣದಿಂದ ಬಸ್‌ಗಳು ನಿಲ್ದಾಣಕ್ಕೆ ಬರಲು ಹಿಂದೇಟು ಹಾಕುತ್ತಿವೆ. ಪರಿಣಾಮ ಹೆದ್ದಾರಿಯಲ್ಲೇ ಬಸ್ ನಿಲುಗಡೆ ಮಾಡುತ್ತಿರುವುದರಿಂದ ಅಪಾಯಕ್ಕೆ ಕಾರಣವಾಗುತ್ತಿದೆ. ಸಂಚಾರ ತೊಡಕು ಸರಿಪಡಿಸುವ ನಿಟ್ಟಿನಲ್ಲಿ ಹೆದ್ದಾರಿಯಿಂದ ನಿಲ್ದಾಣಕ್ಕೆ ಆಗಮಿಸುವಲ್ಲಿ ಸಮತಟ್ಟು ಮಾಡುವಂತೆ ಪಡುಬಿದ್ರಿ ಠಾಣಾಧಿಕಾರಿ ನವಯುಗ ಕಂಪನಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಹೆದ್ದಾರಿ ವಿಭಜಕದಲ್ಲಿ ಬಿಲ್ಲವ ಸಂಘದಿಂದ ಕೋರ್ಟ್ ಯಾರ್ಡ್‌ವರೆಗೆ ದೀಪಗಳನ್ನು ಅಳವಡಿಸಿದ್ದರೂ ಅದನ್ನು ಉರಿಸುವ ಕೆಲಸ ಆಗಿಲ್ಲ. ಇದರಿಂದ ಪಡುಬಿದ್ರಿ ಪೇಟೆ ಭಾಗದಲ್ಲಿ ಕತ್ತಲು ತುಂಬಿದೆ.

ಅಪಾಯಕಾರಿ ಜಂಕ್ಷನ್: ಪಡುಬಿದ್ರಿ ಪ್ರದೇಶದಲ್ಲಿ ತಲೆ ಎತ್ತಿರುವ ಬೃಹತ್ ಉದ್ದಿಮೆಗಳಿಗೆ ಬರುವ ಭಾರಿ ವಾಹನಗಳ ಸಂಚಾರಕ್ಕೆ ಪ್ರಮುಖ ರಸ್ತೆಯಾಗಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಕಾರ್ಕಳ-ಕುದುರೆಮುಖ ರಾಜ್ಯ ಹೆದ್ದಾರಿಯನ್ನೂ ಸಂಧಿಸುವ ಜಂಕ್ಷನ್ ತೀರ ಅಪಾಯಕಾರಿಯಾಗಿದೆ. ಈ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಇಲ್ಲಿ ಪೊಲೀಸರೂ ಸುಗಮ ಸಂಚಾರಕ್ಕೆ ಹರಸಾಹಸ ಪಡಬೇಕಾಗುತ್ತದೆ. ಇದೊಂದು ಅಪಘಾತ ವಲಯವಾಗಿದ್ದು, ಈ ಜಂಕ್ಷನ್‌ಗೆ ಸೂಕ್ತ ಸಿಗ್ನಲ್ ವ್ಯವಸ್ಥೆಯಾಗಬೇಕಿದ್ದು, ಪೂರ್ಣಕಾಲಿಕ ಪೊಲೀಸ್ ವ್ಯವಸ್ಥೆಯನ್ನೂ ಮಾಡಬೇಕಾಗಿದೆ.

ಪಡುಬಿದ್ರಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರ ನವಯುಗ ಕಂಪನಿ ಇಂಜಿನಿಯರ್ ಅವರಲ್ಲಿ ಮಾತುಕತೆ ನಡೆಸಲಾಗಿದೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಕೆಲಸ ಪೂರ್ಣಗೊಳಿಸುವುದಾಗಿ ಇಂಜಿನಿಯರ್ ತಿಳಿಸಿದ್ದಾರೆ.

-ಕೆ.ರಾಜು, ಉಪವಿಭಾಗಾಧಿಕಾರಿ, ಕುಂದಾಪುರ

ಪಡುಬಿದ್ರಿ ಸಿಎ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಬಳಿ ಬಸ್ ನಿಲ್ದಾಣಕ್ಕೆ ಸ್ಥಳ ಅಂತಿಮಗೊಳಿಸಿ ಹೆದ್ದಾರಿ ಪ್ರಾಧಿಕಾರ ಹಾಗೂ ನವಯುಗ ಕಂಪನಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರು ಹಾಗೂ ಆಟೋ ನಿಲ್ದಾಣದ ಬಗ್ಗೆ ಇನ್ನೂ ಜಾಗ ಅಂತಿಮವಾಗಿಲ್ಲ.

-ಪಂಚಾಕ್ಷರಿ ಸ್ವಾಮಿ ಕೆರಿಮಠ, ಪಿಡಿಒ, ಪಡುಬಿದ್ರಿ ಗ್ರಾಪಂ

ಗ್ರಾಪಂ ಮೂಲಕ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಜಿಲ್ಲಾಧಿಕಾರಿ ನೀಡಿರುವ ಭರವಸೆಯಂತೆ ಗ್ರಾಪಂನಿಂದ ನಡೆಯಬೇಕಿದ್ದ ಪ್ರತಿಭಟನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಾಮಗಾರಿ ಪೂರ್ಣವಾಗದಿದ್ದಲ್ಲಿ ಟೋಲ್ ರದ್ದು ಮಾಡುವುದಾಗಿ ಸಂಸದರೂ ತಿಳಿಸಿದ್ದಾರೆ. ಮಾರ್ಚ್ ಬಳಿಕ ಜನಾಭಿಪ್ರಾಯ ಪಡೆದು ಮತ್ತೆ ಹೋರಾಟದ ನಿರ್ಧಾರ ತೆಗೆದುಕೊಳ್ಳಲಾಗುವುದು.

-ವೈ.ಸುಕುಮಾರ್, ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net