ಕೆಪಿಎಸ್ ಶಾಲಾ ಕಟ್ಟಡಕ್ಕೆ 2 ಕೋಟಿ ರೂ. ಅನುದಾನ: ಕೆಪಿಎಸ್ ಶಾಲೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕ ಲಾಲಾಜಿ ಮೆಂಡನ್ ಭರವಸೆ

0808ra3 e
Published on

ಪಡುಬಿದ್ರಿ: ರಾಜ್ಯ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಮಂಜೂರು ಮಾಡಿರುವ ಕೆಪಿಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್)ಗೆ ಮುಂದಿನ ಎರಡು ತಿಂಗಳಲ್ಲಿ ಸುಮಾರು 2 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭರವಸೆ ನೀಡಿದ್ದಾರೆ. ಪಡುಬಿದ್ರಿಯ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ಎರಡು ತರಗತಿ ಕೋಣೆಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದೆಂದು ಕಾಪು ಶಾಸಕ ಲಾಲಾಜಿ ಮೆಂಡನ್ ಹೇಳಿದರು.

ಪಡುಬಿದ್ರಿ ಸರ್ಕಾರಿ ಪದವಿಪೂರ್ವ ಕಾಲೇಜು, ಕೆಪಿಎಸ್ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಸಮಸ್ಯೆಗಳನ್ನು ಆಲಿಸಿದ ಶಾಸಕರು ಮೊದಲು ಆಂತರಿಕ ಸಮಸ್ಯೆ ಬಗೆಹರಿಸಿಕೊಳ್ಳಿ. ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಕಾಲೇಜುಗಳ ಮುಖ್ಯಸ್ಥರಲ್ಲಿ ಹೊಂದಾಣಿಕೆ ಅಗತ್ಯ ಎಂದರು. ಸಂಚಿತ ನಿಧಿಯ 12 ಲಕ್ಷ ರೂ. ಬಳಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಕಾಲೇಜು ಅಭಿವೃದ್ಧಿ ಸಮಿತಿ ಒಪ್ಪಿಗೆ ಪಡೆದು ಡಿಡಿಪಿಐ ಅವರೊಂದಿಗೆ ಪತ್ರ ವ್ಯವಹಾರ ನಡೆಸಿ ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳ, ಶಾಲಾ, ಕಾಲೇಜುಗಳ ಅವಶ್ಯಕತೆ ಪೂರೈಸಿಕೊಳ್ಳಿ. ಸ್ಥಳೀಯ ದಾನಿಗಳ ಸಹಕಾರ ಪಡೆಯಿರಿ ಎಂದರು.

ಶಿಕ್ಷಕರ ಕೊರತೆ, ಸೋರುತ್ತಿರುವ ಛಾವಣಿ: ಕಾಲೇಜಿನಲ್ಲಿ ನಾಲ್ವರು ಪ್ರಾಧ್ಯಾಪಕರ ಕೊರತೆ ಮತ್ತು ಪ್ರಾಥಮಿಕ ಶಾಲೆಯಲ್ಲಿ ಓರ್ವ ಶಿಕ್ಷಕರ ಕೊರತೆಯಿದೆ. ಈ ನಡುವೆ ನಿಯೋಜನೆಯಲ್ಲಿ ಇಲ್ಲಿನ ಐದಾರು ಪ್ರಾಧ್ಯಾಪಕರನ್ನು ಬೇರೆಡೆಗೆ ಕಳುಹಿಸಲಾಗಿದೆ. ತಾತ್ಕಾಲಿಕ ಶಿಕ್ಷಕರಿಗೆ ತಿಂಗಳುಗಳಿಂದ ವೇತನ ಪಾವತಿಸಿಲ್ಲ. ಇತ್ತೀಚೆಗೆ ನಿರ್ಮಿಸಲಾಗಿರುವ ಕಟ್ಟಡದ ಕಾಮಗಾರಿಯಲ್ಲಿ ನ್ಯೂನ್ಯತೆ ಕಂಡುಬಂದಿದೆ. ಮಳೆಗಾಲದಲ್ಲಿ ತರಗತಿ ಕೋಣೆ ಸೋರುತ್ತಿದೆ ಎಂದು ಪ್ರಾಂಶುಪಾಲರು ಶಾಸಕ ಲಾಲಾಜಿ ಮೆಂಡನ್ ಅವರಿಗೆ ದೂರು ನೀಡಿದರು.

ಸರ್ಕಾರಿ ಪಿ. ಯು. ಕಾಲೇಜು ಪ್ರಾಂಶುಪಾಲೆ ಅನುರಾಧಾ ತಾನು ನಿವೃತ್ತಿಯ ಅಂಚಿನಲ್ಲಿ ಬೇಕಾಬಿಟ್ಟಿ ಕ್ರಮ ಕೈಗೊಳ್ಳಲಾಗದು. ವರಿಷ್ಠರ ಅನುಮತಿ ಇದ್ದಾಗಲಷ್ಟೇ ಸಂಚಿತ ನಿಧಿ ಉಪಯೋಗಿಸಿ ಶಾಲಾ ಪೀಠೋಪಕರಣಗಳ ದುರಸ್ತಿ ಮತ್ತಿತರ ಕಾಮಗಾರಿ ಮಾಡಿಸಬಹುದೆಂದರು.

ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಬಂಗೇರ ವಿರೋಧ ವ್ಯಕ್ತಪಡಿಸಿ ಕೆಪಿಎಸ್‌ನಲ್ಲಿ ಎಲ್‌ಕೆಜಿ, ಯುಕೆಜಿ ಪುಟಾಣಿಗಳು ಮಳೆಗಾಲದಲ್ಲೂ ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದಾರೆ. ಇವರಿಗೆ ತುರ್ತು ಆಸನ ವ್ಯವಸ್ಥೆಯಾಗಬೇಕೆಂದರು. ಇದಕ್ಕೆ ಪೂರಕವಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅವರು , ಈ ಹಿಂದೆ ಎರಡು ಬಾರಿ ಪೀಠೋಪಕರಣಗಳಿಗೆ ಆರ್ಡರ್ ನೀಡಿ ರದ್ದುಗೊಳಿಸಲಾಗಿದೆ. ಶಾಲಾ ಅಧ್ಯಾಪಕರು, ಪ್ರೌಢಶಾಲಾ ಶಿಕ್ಷಕ ವರ್ಗ ಹಾಗೂ ಕಾಲೇಜು ಮುಖ್ಯಸ್ಥರ ನಡುವೆ ಅಭಿಪ್ರಾಯ ಬೇಧ ಕಂಡು ಬೇಸತ್ತಿರುವುದಾಗಿ ತಿಳಿಸಿದರು.

ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೃಷ್ಣಯ್ಯ, ಪ್ರೌಢಶಾಲಾ ಮುಖ್ಯಶಿಕ್ಷಕ ಪ್ರಸನ್ನ, ಪಡುಬಿದ್ರಿ ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಪೊಲೀಸ್ ಠಾಣಾ ಎಎಸ್‌ಐ ಸುರೇಶ್ ಭಟ್, ತಾಪಂ ಮಾಜಿ ಸದಸ್ಯೆ ನೀತಾ ಗುರುರಾಜ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಪದ್ಮಿನಿ, ದಯಾನಂದ ಶೆಟ್ಟಿ ಮತ್ತಿತರರು ಸಭೆಯಲ್ಲಿದ್ದರು. ಪ್ರಾಂಶುಪಾಲೆ ಅನುರಾಧಾ ಸ್ವಾಗತಿಸಿದರು. ಪ್ರಾಧ್ಯಾಪಕ ನವನೀತ್ ಅರಸ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net