ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ, ಹೆಜಮಾಡಿ ಪ್ರಗತಿಪರ ಕೃಷಿಕನ ಯಶೋಗಾಥೆ

pdb
Published on

ಹೇಮನಾಥ್ ಪಡುಬಿದ್ರಿ

ಹೆಜಮಾಡಿ ಗ್ರಾಪಂ ಘನತ್ಯಾಜ್ಯ ಸಂಸ್ಕರಣ ಘಟಕದ ಹಸಿ ತ್ಯಾಜ್ಯವನ್ನು ಅಡಕೆ ಹಾಗೂ ತೆಂಗು ಬೆಳೆಗೆ ಸಾವಯವ ಗೊಬ್ಬರವಾಗಿ ಬಳಸಿ ಹೆಜಮಾಡಿ ಶಿವನಗರದ ಪ್ರಗತಿಪರ ಕೃಷಿಕ ಭಾಸ್ಕರ ಶೆಟ್ಟಿ ತೋಟಗಾರಿಕೆಯಲ್ಲಿ ಯಶಸ್ಸು ಕಂಡಿದ್ದಾರೆ.

ಹಲವು ವರ್ಷಗಳಿಂದ ಕೃಷಿಯಲ್ಲಿ ತೊಡಗಿರುವ ಅವರು ಎರಡು ವರ್ಷಗಳ ಹಿಂದೆ ಹೆಜಮಾಡಿ ಗ್ರಾಪಂನಲ್ಲಿ ಆರಂಭಿಸಿರುವ ಎಸ್‌ಎಲ್‌ಆರ್‌ಎಂ ಘಟಕದ ಹಸಿ ತ್ಯಾಜ್ಯವನ್ನು ತೋಟಕ್ಕೆ ಬಳಸಿ ಒಂದೆಡೆ ಗ್ರಾಪಂನ ಹಸಿ ತ್ಯಾಜ್ಯ ಸಮಸ್ಯೆಗೆ ಮುಕ್ತಿ ನೀಡಿರುವುದಲ್ಲದೆ, ಸಾವಯವ ಗೊಬ್ಬರವಾಗಿ ತೋಟಕ್ಕೆ ಬಳಸಿ ರಾಸಾಯನಿಕ ಗೊಬ್ಬರಕ್ಕೆ ವಿದಾಯ ಹೇಳಿದ್ದಾರೆ. ಮೂರು ವರ್ಷಗಳಿಂದ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಸಂಗ್ರಹಿಸಿದ ಹಸಿ ತ್ಯಾಜ್ಯವನ್ನು ಅರ್ಧ ಎಕರೆಯಲ್ಲಿನ 250 ಅಡಕೆ ಹಾಗೂ ತೆಂಗಿನ ಗಿಡಗಳಿಗೆ ಬಳಕೆ ಮಾಡಿದ್ದು, ಉತ್ತಮವಾಗಿ ಬೆಳೆದ ಅಡಕೆ ಗಿಡಗಳು ನಾಲ್ಕೇ ವರ್ಷಗಳಲ್ಲಿ ಫಲ ನೀಡಲಾರಂಭಿಸಿವೆ.

ಸಾರ್ವಜನಿಕ ಕಾರ್ಯಕ್ರಮಗಳ ತ್ಯಾಜ್ಯಕ್ಕೆ ಪ್ರತ್ಯೇಕ ವ್ಯವಸ್ಥೆ: ಗ್ರಾಪಂ ವ್ಯಾಪ್ತಿಯಲ್ಲಿನ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಸಂಗ್ರಹವಾಗುವ ಅಡಕೆ ಹಾಳೆಗಳ ತಟ್ಟೆಗಳು, ಹೂ, ಬಾಳೆ ದಿಂಡು, ಬಾಳೆ ಎಲೆ ಉಳಿಕೆಯಾಗುವ ಆಹಾರ ಪದಾರ್ಥಗಳನ್ನು ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಿ ಭಾಸ್ಕರ ಶೆಟ್ಟಿ ತೋಟಕ್ಕೆ ತರಲಾಗುತ್ತದೆ. ಅವುಗಳನ್ನು ಗಿಡಗಳಿಗೆ ನೇರವಾಗಿ ಬಳಸದೆ ಪ್ರತ್ಯೇಕ ಕಾಂಪೋಸ್ಟ್ ಗುಂಡಿಗಳಲ್ಲಿ ಸೆಗಣಿ ನೀರು ಹಾಕಿ ಆರು ತಿಂಗಳ ಕಾಲ ಕೊಳೆಯಲು ಬಿಡಲಾಗುತ್ತದೆ. ಆರು ತಿಂಗಳ ಬಳಿಕ ಅದನ್ನು ತೋಟಕ್ಕೆ ಗೊಬ್ಬರವಾಗಿ ಬಳಸಲಾಗುತ್ತದೆ. ಈ ರೀತಿ ಹಸಿ ಕಸವನ್ನು ಗೊಬ್ಬರವಾಗಿ ಬಳಕೆ ಮಾಡಿ ಪ್ರಗತಿ ಸಾಧಿಸಿರುವ ಅವರ ಕ್ರಮವನ್ನು ಇತರ ಗ್ರಾಮಗಳಲ್ಲಿಯೂ ಕೃಷಿಕರು ಸಮರ್ಪಕವಾಗಿ ಅನುಷ್ಠಾನಿಸಲು ಮುಂದೆ ಬಂದಲ್ಲಿ ಗ್ರಾಮಗಳಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯ ಸಮಸ್ಯೆಗೆ ಮುಕ್ತಿ ದೊರೆಯುವುದರಲ್ಲಿ ಸಂಶಯವಿಲ್ಲ.

ನೊಣಗಳ ಹತೋಟಿಯಲ್ಲೂ ಯಶಸ್ಸು: ಮರಗಳ ಬುಡಕ್ಕೆ ಹಸಿ ತ್ಯಾಜ್ಯ ಬಳಕೆಯಿಂದ ನೊಣಗಳ ಹಾವಳಿ ಉಂಟಾದರೂ, ಸಾಮಾಜಿಕ ಜಾಲತಾಣವೊಂದರಲ್ಲಿ ವೈರಲ್ ಆದ ವಿಡಿಯೋ ತುಣುಕೊಂದನ್ನು ವೀಕ್ಷಿಸಿ ಅನುಷ್ಠಾನಿಸಿ ಅವುಗಳ ಹತೋಟಿಯಲ್ಲೂ ಭಾಸ್ಕರ ಶೆಟ್ಟಿ ಯಶಸ್ವಿಯಾಗಿದ್ದಾರೆ. ಮೀನಿನ ತ್ಯಾಜ್ಯಕ್ಕೆ ನಿಗದಿತ ಪ್ರಮಾಣದಲ್ಲಿ ಪ್ರೊಡಾನ್ ರಾಸಾಯನಿಕವನ್ನು ನೀರಲ್ಲಿ ಮಿಶ್ರಣ ಮಾಡಿ ಪ್ಲಾಸ್ಟಿಕ್ ಡಬ್ಬಗಳಲ್ಲಿ ನೊಣಗಳ ಪ್ರವೇಶಕ್ಕೆ ಅನುಕೂಲವಾಗುವಂತೆ 4 ರಂಧ್ರ ನಿರ್ಮಿಸಿ ತೋಟದಲ್ಲಿ ಅಲ್ಲಲ್ಲಿ ಇರಿಸಿದ್ದು, ಹಸಿ ತ್ಯಾಜ್ಯಕ್ಕೆ ಬರುವ ನೊಣಗಳು ಡಬ್ಬಗಳಿಗೆ ಬೀಳುವ ಮೂಲಕ ಅವುಗಳ ಹತೋಟಿಯ ಜತೆಗೆ ಅಡಕೆ ಬೆಳೆಗೆ ಬಾಧಿಸುವ ನುಸಿಗಳ ಕಾಟಕ್ಕೂ ಮುಕ್ತಿ ಕಂಡುಕೊಂಡಿದ್ದಾರೆ.

ಹಸಿ ತ್ಯಾಜ್ಯ ಬಳಕೆ ಬಗ್ಗೆ ತೋಟಗಾರಿಕಾ ಇಲಾಖೆ ಮಾರ್ಗದರ್ಶನ ಪಡೆದು ಗಿಡಗಳಿಗೆ ಸೂಕ್ತ ಪ್ರಮಾಣದಲ್ಲಿ ಬಳಕೆಗೆ ಕ್ರಮವಹಿಸಲಾಗಿದೆೆ. ತ್ಯಾಜ್ಯವನ್ನು ಗಿಡಗಳ ಬುಡಕ್ಕೆ ಹಾಕಿದ ಬಳಿಕ ಅಸಹ್ಯ ಕಾಣದಂತೆ ಸೆಗಣಿ ನೀರು, ಮರದ ಹುಡಿ, ತೆಂಗು ಹಾಗೂ ಅಡಕೆ ಗರಿಗಳನ್ನು ಅದರ ಮೇಲೆ ಹಾಸಲಾಗುತ್ತದೆ. ಗ್ರಾಮ ಪಂಚಾಯಿತಿಯಿಂದ ಸೂಕ್ತವಾಗಿ ವಿಂಗಡಿಸಿ ಹಸಿ ತ್ಯಾಜ್ಯವನ್ನು ಮಾತ್ರ ನೀಡುತ್ತಿರುವುದರಿಂದ ಅನುಕೂಲಕರವಾಗಿದೆ. ಹಸಿ ತ್ಯಾಜ್ಯ ಬಳಕೆ ಬಳಿಕ ಮಣ್ಣು ಪರೀಕ್ಷೆ ಮಾಡಲಾಗಿದ್ದು, ವರದಿಯೂ ಸಕಾರಾತ್ಮಕವಾಗಿದೆ.

- ಭಾಸ್ಕರ ಶೆಟ್ಟಿ, ಪ್ರಗತಿಪರ ಕೃಷಿಕ ಶಿವನಗರ ಹೆಜಮಾಡಿ

ಹೆಜಮಾಡಿ ಎಸ್‌ಎಲ್‌ಆರ್‌ಎಂ ಘಟಕ ಆರಂಭವಾಗಿ 3 ವರ್ಷಗಳಾಗುತ್ತಿದೆ. ಗ್ರಾಪಂ ವ್ಯಾಪ್ತಿಯಲ್ಲಿ ದಿನವಹಿ ಸಂಗ್ರಹವಾಗುವ 300 ಕೆಜಿ. ಒಣಕಸದಲ್ಲಿ ಪ್ರತ್ಯೇಕಿಸಲಾಗುವ ಸುಮಾರು 150 ಕೆ.ಜಿ. ಕಸವನ್ನು ಘಟಕದಿಂದ ನೇರವಾಗಿ ತೋಟಕ್ಕೆ ಸಾಗಿಸಲಾಗುತ್ತಿದೆ. ಸಾರ್ವಜನಿಕ ಸಭೆ ಸಮಾರಂಭಗಳ ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಗ್ರಾಪಂನಿಂದ ನಿಗದಿತ ಶುಲ್ಕ ಪಡೆದು ಭಾಸ್ಕರ ಶೆಟ್ಟಿ ಅವರ ತೋಟದಲ್ಲಿ ಕಾಂಪೋಸ್ಟ್ ಮಾಡಲಾಗುತ್ತಿದೆ.

- ಪದ್ಮಾವತಿ, ಹೆಜಮಾಡಿ ಎಸ್‌ಎಲ್‌ಆರ್‌ಎಂ ಘಟಕ ಮೇಲ್ವಿಚಾರಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net