ಪಾದ್ರಿಕೊಪ್ಪಳ ರುದ್ರಭೂಮಿ ಅವ್ಯವಸ್ಥೆ, ಮೂಲಸೌಕರ್ಯಗಳಿಲ್ಲದೆ ಶವಸಂಸ್ಕಾರ ಸ್ಥಗಿತ

rudrabhumi
Published on

ವಿಟ್ಲ: ಮಾಣಿ ಗ್ರಾಮದ ಲಕ್ಕಪ್ಪರಕೋಡಿ ಪಾದ್ರಿಕೊಪ್ಪಳದಲ್ಲಿ ರುದ್ರಭೂಮಿ ಇದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಮೂಲಸೌಕರ್ಯಗಳು ಇಲ್ಲದ ಕಾರಣ ಗ್ರಾಮಸ್ಥರು ಶವ ಸಂಸ್ಕಾರಕ್ಕಾಗಿ ರುದ್ರಭೂಮಿ ಬಳಕೆ ಮಾಡುವುದನ್ನೇ ಕೈಬಿಟ್ಟಿದ್ದಾರೆ.

ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅಧಿಕಾರ ಸ್ವೀಕರಿಸಿದ ಬಳಿಕ ಪ್ರತಿ ಗ್ರಾಮದಲ್ಲಿ ಸುಸಜ್ಜಿತ ರುದ್ರಭೂಮಿ ನಿರ್ಮಾಣವಾಗಬೇಕೆಂಬ ಆಶಯದಂತೆ ಗ್ರಾಮದಲ್ಲಿ ರುದ್ರಭೂಮಿ ನಿರ್ಮಿಸಲಾಗಿತ್ತು. ಆದರೆ ಮಾಣಿಯಲ್ಲಿರುವ ರುದ್ರಭೂಮಿ ಮಾತ್ರ ಪ್ರಯೋಜನಕ್ಕೆ ಬರುತ್ತಿಲ್ಲ. ಪಾದ್ರಿಕೊಪ್ಪಳದಲ್ಲಿ ಸಾರ್ವಜನಿಕ ರುದ್ರಭೂಮಿಯು 1994ರಿಂದ ಚಾಲ್ತಿಯಲ್ಲಿದೆ. ಸದ್ಯ ಸಂಪೂರ್ಣ ನಿರ್ಲಕ್ಷೃಕ್ಕೊಳಗಾಗಿರುವುದರಿಂದ ಜನ ಬಂಟ್ವಾಳ, ಪುತ್ತೂರು ಅಥವಾ ಪರ್ಯಾಯ ಸ್ಮಶಾನಗಳನ್ನು ಅವಲಂಭಿಸಿದ್ದಾರೆ.

ಹಿಂದಿನ ಆರು ಕಬ್ಬಿಣದ ಕಂಬದಲ್ಲಿದ್ದ ಚಿತೆಯನ್ನು ತೆಗೆದು ಕಾಂಕ್ರಿಟ್‌ನಲ್ಲಿ ಚಿತೆ ಬಕೆಟ್ ನಿರ್ಮಾಣ ಮಾಡಲಾಗಿದೆ. ರುದ್ರಭೂಮಿಯ ಸುತ್ತ ಕಳೆಗಿಡ, ಪೊದೆಗಳು ಬೆಳೆದಿದ್ದು, ನಾಮಫಲಕ ಧರಾಶಾಯಿಯಾಗಿದೆ. ಸುಮಾರು 5 ವರ್ಷಗಳಿಂದ ಇಲ್ಲಿ ವ್ಯವಸ್ಥಿತವಾಗಿ ದಹನ ಕಾರ್ಯ ನಡೆಯುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಗ್ರಾಮಸ್ಥರ ಸಭೆ ನಡೆಸಲಾಗಿದ್ದರೂ ಸಮಿತಿ ರಚಿಸಿಲ್ಲ ಎಂಬ ಆರೋಪ ಸ್ಥಳೀಯರದ್ದು.

20ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ: ಪ್ರಸ್ತುತ ನೂತನ ರುದ್ರಭೂಮಿ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಸಮಿತಿ ಅಧ್ಯಕ್ಷರಾಗಿ ಪ್ರಪುಲ್ಲ ರೈ ಹಾಗೂ ಉಪಾಧ್ಯಕ್ಷರಾಗಿ ಜಗನ್ನಾಥ ಚೌಟ ಇದ್ದು, ಪಂಚಾಯಿತಿ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಆಧುನಿಕ ವ್ಯವಸ್ಥೆ ಮಾಡಲು ಯೋಜನೆ ಹಾಕಲಾಗಿದೆ. ಸ್ಮಶಾನದಲ್ಲಿ ಕಟ್ಟಿಗೆ ಇಡುವ ಕಟ್ಟಡವನ್ನು ಬಿಟ್ಟು ಉಳಿದುದನ್ನು ಸಂಪೂರ್ಣ ಕೆಡವಿ ಭೂಮಿ ಸಮತಟ್ಟು ಮಾಡಲಾಗಿದೆ. ಇಲ್ಲಿನ ವಿದ್ಯುತ್ ಕಂಬ ಸ್ಥಳಾಂತರ ಕಾರ್ಯವಾಗದ ಕಾರಣ ಕಾಮಗಾರಿ ಮುಂದುವರಿಯಲಿಲ್ಲ.

ಮಾಣಿಯ ರುದ್ರ ಭೂಮಿಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಗ್ರಾಮದ ಜನರು ನಗರಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಸನ್ಮಾಶದ ಅಭಿವೃದ್ಧಿ ಅಗತ್ಯವಿದೆ.

- ವೆಂಕಟ್ರಮಣ ಪೈ ಮಾಣಿ, ಗ್ರಾಮಸ್ಥರು

ರುದ್ರಭೂಮಿಯ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಲ್ಲಿ ವಿಚಾರಿಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು.

ರಾಜಣ್ಣ

- ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯಿತಿ ಬಂಟ್ವಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net