ಸನ್ಮಾನಕ್ಕಿಂತ ಮಕ್ಕಳ ಸಂತಸ ದೊಡ್ಡದು

web (3)
Published on

ಕಡೂರು: ವೈಯಕ್ತಿಕ ಕಾರಣಕ್ಕಿಂತ ಸಮಾಜದ ಒಳಿತಿಗಾಗಿ ಸ್ವಲ್ಪವಾದರೂ ಸೇವೆ ಮಾಡಿದರೆ ದೊಡ್ಡ ಸಾಧನೆಯಾಗುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಸಮಾಜ ಸೇವಕ ಹರೇಕಳ ಹಾಜಬ್ಬ ಅಭಿಪ್ರಾಯಪಟ್ಟರು.

ಪಟ್ಟಣದ ಜ್ಞಾನಭಾರತಿ ಹೋಂ ಫಾರ್ ಎಜುಕೇಶನ್ ಸಂಸ್ಥೆ ಹಮ್ಮಿಕೊಂಡಿದ್ದ ನೃತ್ಯ ದರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಿತ್ತಳೆ ಹಣ್ಣು ಮಾರುತ್ತಿದ್ದ ನನಗೆ ವಿದೇಶಿಯರೊಬ್ಬರು ಹಣ್ಣಿನ ಬೆಲೆ ಕೇಳಿದಾಗ ನನಗೆ ಅರ್ಥ ಆಗಲಿಲ್ಲ. ಕಾರಣ ನನ್ನ ಅನಕ್ಷರತೆ. ಇಂತಹ ಪರಿಸ್ಥಿತಿ ನನ್ನೂರಿನ ಮಕ್ಕಳಿಗೆ ಬರಬಾರದೆಂಬ ಉದ್ದೇಶದಿಂದ ಶಾಲೆಯೊಂದನ್ನು ಆರಂಭಿಸಲು ಮುಂದಾದಾಗ ಅಪಹಾಸ್ಯಕ್ಕೆ ಈಡಾದರೂ ಧೈರ್ಯ ಕಳೆದುಕೊಳ್ಳಲಿಲ್ಲ. ನೋವು, ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿ ಆತ್ಮವಿಶ್ವಾಸದಿಂದ ಪ್ರಯತ್ನ ಮುಂದುವರಿಸಿದೆ ಎಂದರು.

ಒಂದು ದಿನ 28 ಮಕ್ಕಳೊಡನೆ ಶಾಲೆ ಆರಂಭವಾಯಿತು. ಇದೀಗ ಆ ಶಾಲೆಯಲ್ಲಿ 120ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ನನ್ನ ಆಶಯಕ್ಕೆ ಸಹಾಯ ನೀಡಿದ ಎಲ್ಲರಿಗೂ ನನ್ನ ಕೃತಜ್ಞತೆ ಸಲ್ಲುತ್ತದೆ. ಪ್ರಶಸ್ತಿ, ಸನ್ಮಾನಗಳಿಗಿಂತ ಆ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಲ್ಲಿ ಕಾಣುವ ಸಂತಸ ದೊಡ್ಡದು ಎಂದು ಹೇಳಿದರು.

ರಾಯಚೂರಿನ ಪ್ರಗತಿಪರ ಕೃಷಿಕ ಮಹಿಳೆ ಕವಿತಾ ಉಮಾಶಂಕರ ಮಿಶ್ರ ಮಾತನಾಡಿ, ಇಂದು ಉನ್ನತ ಶಿಕ್ಷಣ ಪಡೆದವರಿಗೆ ಸಿಗುವಷ್ಟೇ ಮಹತ್ವ ಕೃಷಿಕರಿಗೂ ಸಿಗುವಂತಹ ದಿನಗಳು ಬಹುಬೇಗ ಬರುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ರೈತರು ಸ್ಥೈರ್ಯ ಕಳೆದುಕೊಳ್ಳದೆ ಹೊಸ ತಂತ್ರಜ್ಞಾನಗಳನ್ನು ಸಮಗ್ರ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಂಡು ಸುಸ್ಥಿರತೆ ಪಡೆಯಬೇಕು ಎಂದರು.

ಜ್ಞಾನಭಾರತಿ ಸಂಸ್ಥೆ ಅಧ್ಯಕ್ಷೆ ಸುಜಾತಾ ಕೃಷ್ಣಮೂರ್ತಿ ಮಾತನಾಡಿ, ಶಾಲೆಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಆತ್ಮಸ್ಥೈರ್ಯ ಹೆಚ್ಚಿಸುವ ನೈತಿಕ ಶಿಕ್ಷಣ ನೀಡಬೇಕು. ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದಂತಹ ಮಹಾನ್ ಚೇತನಗಳ ಬಗ್ಗೆ ಗೌರವ ಬೆಳೆಸುವಂತಹ ಕಾರ್ಯವನ್ನು ಪಾಲಕರು ಮಾಡಬೇಕು ಎಂದು ತಿಳಿಸಿದರು.

ಹಾಜಬ್ಬ ಅವರಿಗೆ ಅಕ್ಷರ ಕಲ್ಪಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಖ್ಯಶಿಕ್ಷಕಿ ನಂದಿನಿ ಪಿ.ಶಿರಹಟ್ಟಿ, ಮುಖ್ಯಶಿಕ್ಷಕ ಲಕ್ಷ್ಮೀಶ್ ಪಿ. ಶಿರಹಟ್ಟಿ, ಕೆ.ಪುಂಡಲೀಕ ರಾವ್, ಕಮಲ್ ಚಂದ್ ಡಾಗ, ಬಷೀರ್ ಸಾಬ್, ಇಮಾಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net