

ಶಿವಮೊಗ್ಗ: ಭಾರತ ಕಲೆ ಮತ್ತು ಸಂಸ್ಕೃತಿಗಳಿಂದ ವಿಶ್ವದಲ್ಲಿ ಪ್ರಸಿದ್ಧವಾಗಿದೆ. ಹೊಸಹಳ್ಳಿಯ ಕೇಶವಮೂರ್ತಿ ಅವರು ಗಮಕದ ಬಗ್ಗೆ ವಿಶೇಷ ಅಭ್ಯಾಸ ಮಾಡಿ, ಲಕ್ಷಾಂತರ ಮಂದಿಗೆ ಆ ಕಲೆಯನ್ನು ಕರಗತ ಮಾಡಿಸಿದ್ದಾರೆ. ಕೇಂದ್ರ ಸರ್ಕಾರ ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸುವ ಮೂಲಕ ಗಮಕ ಕಲೆಗೆ ವಿಶೇಷ ಗೌರವ ಸಲ್ಲಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.
ಹೊಸಹಳ್ಳಿ ಕೇಶವಮೂರ್ತಿ ಅವರನ್ನು ಶನಿವಾರ ಅಭಿನಂದಿಸಿ ಮಾತನಾಡಿ, ರಾಮಾಯಣ, ಮಹಾಭಾರತ ಮುಂತಾದ ಮಹಾಕಾವ್ಯಗಳನ್ನು ಗಮಕದ ಮೂಲಕ ಪ್ರಚುರಪಡಿಸಿ ಕೋಟ್ಯಂತರ ಮಂದಿಗೆ ನೆಮ್ಮದಿ ಮೂಡಿಸಿದ್ದಾರೆ. ತಮ್ಮ ವಿಶಿಷ್ಟ ಧ್ವನಿಯ ಮೂಲಕ ಗಮಕ ಗಂಧರ್ವ ಎನಿಸಿಕೊಂಡಿದ್ದಾರೆ. ಇವರು ಇಡೀ ದೇಶದ ಹೆಮ್ಮೆ ಎಂದರು.
ಗಮಕ ಕಲೆಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೇಶವಮೂರ್ತಿ ಅವರು ನೂರು ಕಾಲ ನಮ್ಮ ನಡುವೆಯಿದ್ದು, ಸಮಾಜಕ್ಕೆ ಮಾರ್ಗದರ್ಶನ ನೀಡಲಿ ಎಂದು ಆಶಿಸಿದರು.
ಹೊಸಳ್ಳಿಯ ಎಚ್.ಬಿ.ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಸಿಕ್ಕಿರುವುದು ಇಡೀ ದೇಶಕ್ಕೆ ಗಮಕ ಪರಿಚಯವಾಗಿದೆ. ಕೇಶವಮೂರ್ತಿ ಅವರು ಇಡೀ ರಾಜ್ಯಕ್ಕೆ ಭಾರತೀಯ ಸಂಸ್ಕೃತಿ ಪರಿಚಯಿಸಿದ ವಿದ್ವಾಂಸರು. ಅವರು ಶಿವಮೊಗ್ಗ ಜಿಲ್ಲೆ ಮತ್ತು ತಾಲೂಕಿನವರು ಎಂಬುದು ಹೆಮ್ಮೆಯ ವಿಷಯ ಎಂದರು.
ಮೇಯರ್ ಸುನೀತಾ ಅಣ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ನಗರಾಧ್ಯಕ್ಷ ಜಗದೀಶ್, ಸೂಡಾ ಅಧ್ಯಕ್ಷ ಎನ್.ಜಿ. ನಾಗರಾಜ್, ಪಾಲಿಕೆ ಸದಸ್ಯರಾದ ಎಸ್. ಜ್ಞಾನೇಶ್ವರ್, ಸುವರ್ಣಾ ಶಂಕರ್, ಪ್ರಭಾಕರ್, ಪ್ರಮುಖರಾದ ಹೊಸಹಳ್ಳಿ ವೆಂಕಟರಾಮ್ ಇತರರಿದ್ದರು.