ಬಿಜೆಪಿ ನಾಯಕರಿಂದ ಪೊಲೀಸರ ಆತ್ಮಸ್ಥೈರ್ಯ ಕೆಡಿಸುವ ಕಾರ್ಯ : ಪದ್ಮರಾಜ್ ಆರ್. ಪೂಜಾರಿ

Padmaraj-R-Kudroli-KPCC-750x536
Published on


ಮಂಗಳೂರು : ರಾಜ್ಯ ಬಿಜೆಪಿ ನಾಯಕರು ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಪೊಲೀಸರ ಆತ್ಮಸ್ಥೈರ್ಯ ಕೆಡಿಸುವ ಹಾಗೂ ಅವರ
ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವ ಕಾರ್ಯ ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಬಿಜೆಪಿಯವರು ರಾಜ್ಯ
ನಾಯಕರನ್ನು ಕರೆಸಿ ಪ್ರಚೋದನೆ ಕೊಡುವ ಬದಲು ಶಾಂತಿ ನೆಲೆಸುವ ಸಂದೇಶ ಸಮಾಜಕ್ಕೆ ನೀಡುವಂತೆ ವಿನಂತಿಸಬೇಕಿತ್ತು ಎಂದರು.
ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಇಲ್ಲಿ ಸಾಮಾಜಿಕ, ಧಾರ್ಮಿಕ ಮುಖಂಡರು ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ
ಆಡಳಿತದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಪೂರ್ಣವಾದ ಸ್ವಾತಂತ್ರೃ ಇರುವುದನ್ನು ಖಾತರಿಪಡಿಸಿದ್ದಾರೆ. ಇದು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಇರುವ ವ್ಯತ್ಯಾಸ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಸಂಸದರಾಗಿ ಬ್ರಿಜೇಶ್ ಚೌಟ ಒಂದು ವರ್ಷ ಪೂರೈಸಿದ್ದಾರೆ. ಅವರಿಗೆ ಅಭಿವೃದ್ಧಿ ಕಾರ್ಯಗಳಿಗೆ ಇನ್ನೂ ಸಮಯಾವಕಾಶ ಇದೆ. ಚುನಾವಣೆಯಲ್ಲಿ ನನಗೆ ಜಿಲ್ಲೆಯ 614923 ಮಂದಿ ಮತ ನೀಡಿದ್ದಾರೆ. ಹಾಗಾಗಿ ಜನತೆಯ ಹಿತ ಕಾಯುವ ಜವಾಬ್ದಾರಿ ನನಗೂ ಇದೆ. ಸಂಸದರ ಬಗ್ಗೆ ಟೀಕೆ ಮಾಡುತ್ತಿಲ್ಲ. ಆದರೆ ಅಭಿವೃದ್ದಿಗೆ ಸಂಬಂಧಿಸಿ ಗಮನ ಸೆಳೆಯಬೇಕಾಗಿದೆ. ಈಗ ಗೇಲ್ ಸ್ವಾಮ್ಯದಲ್ಲಿರುವ ಜೆಬಿಎಫ್ ಕಂಪನಿಯು ಭೂಮಿ ಕಳೆದುಕೊಂಡ ಮನೆಯವರಿಗೆ ಶಾಶ್ವತ ಉದ್ಯೋಗ ಕಲ್ಪಿಸಬೇಕು. ಮಹಾಕಾಳಿಪಡ್ಪು ರೈಲ್ವೇ ಕೆಳ ಸೇತುವೆ ನಿರ್ಮಾಣಕ್ಕಾಗಿ ಆ ಭಾಗದ ರಸ್ತೆಯಲ್ಲಿ ಸಂಚಾರ ಸ್ಥಗಿತ ಆಗಿ ಹಲವು ವರ್ಷಗಳಾಗಿವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸದ್ಯ ಗಲ್ಫ್ ದೇಶಗಳ ನಡುವೆ ಮಾತ್ರವೇ ವಿಮಾನ ಸಂಚಾರ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಿದ ಸಿಂಗಾಪುರ ಏರ್‌ಲೈನ್ಸ್ ಎಲ್ಲಿಗೆ ಹೋಯಿತು ? ಮುಂಬೈ -ಮಂಗಳೂರು ನಡುವೆ ಹೆಚ್ಚುವರಿ ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಕೂಳೂರು ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಸಂಸದರು ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ ನವೀನ್ ಡಿಸೋಜಾ, ಪ್ರಕಾಶ್ ಸಾಲಿಯಾನ್, ನೀರಜ್ ಪಾಲ್, ಕೇಶವ ಮರೋಳಿ, ಲಾರೆನ್ಸ್ ಡಿಸೋಜಾ ಸುಹಾನ್ ಆಳ್ವ, ಶುಭೋದಯ ಆಳ್ವ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net