ಜೇನುಕುರುಬರ ಮುಖಂಡ ಸೋಮಣ್ಣ ಅವರಿಗೆ ಪದ್ಮಶ್ರೀ ಪ್ರಶಸ್ತಿ

mysore
Published on

ಮೈಸೂರು: ಎಚ್.ಡಿ.ಕೋಟೆ ತಾಲೂಕಿನ ಜೇನುಕುರುಬರ ಮುಖಂಡ ಸೋಮಣ್ಣ ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿ ಒಲಿದಿದೆ.


1957ರ ಜೂನ್ 1ರಂದು ಜನಿಸಿದ ಸೋಮಣ್ಣ, ಶಾಲೆಯ ಸಾಂಪ್ರದಾಯಿಕ ಶಿಕ್ಷಣ ಪಡೆದವರಲ್ಲ. ಆದಾಗ್ಯೂ ಕಳೆದ 3-4 ದಶಕಗಳಿಂದ ಭೂರಹಿತ ಆದಿವಾಸಿಗಳನ್ನು ಸಂಘಟಿಸಿದ್ದಾರೆ. ಸ್ಥಳೀಯ ಪ್ರಗತಿಪರ ಹೋರಾಟಗಾರರ ಜತೆಗೂಡಿ ಕಟ್ಟಿದ ರಾಜ್ಯ ಮೂಲನಿವಾಸಿ ವೇದಿಕೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸೋಮಣ್ಣ, ತಮ್ಮ ಸಾಂಘಿಕ ಪ್ರಯತ್ನದಿಂದಾಗಿ ಆದಿವಾಸಿಗಳಿಗೆ ಸುಮಾರು 6 ಸಾವಿರ ಎಕರೆ ಕೃಷಿ ಭೂಮಿ ದೊರಕಿಸಿಕೊಟ್ಟಿದ್ದಾರೆ.


ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾಗರಹೊಳೆ ಮತ್ತು ಕಾಕನಕೋಟೆ ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಿದ ಆದಿವಾಸಿಗಳನ್ನು ಸೋಮಣ್ಣ ಸಂಘಟಿಸಿ, ಪುನರ್ವಸತಿಗಾಗಿ ಅನೇಕ ಚಳವಳಿ ರೂಪಿಸಿದ್ದಾರೆ. ಹೀಗಾಗಿ, ಇವರ ಪಾಲಿಗೆ ಇವರು ಅಂತರಂಗದ ಬಂಧು.


ಸೋಮಣ್ಣ ಅವರು 1989ರಿಂದಲೇ ಜೇನುಕುರುಬ, ಬೆಟ್ಟಕುರುಬ, ಎರವ ಮತ್ತು ಸೋಲಿಗರನ್ನು ಸಂಘಟಿಸಿ ಪುನರ್ವಸತಿಗಾಗಿ ಹೋರಾಟ ನಡೆಸಿದರು. ಜತೆಗೆ, ಕಾನೂನು ಹೋರಾಟ ನಡೆಸಿದರು. ಒಕ್ಕಲೆಬ್ಬಿಸಿದ ಆದಿವಾಸಿಗಳ ಪರ ಸಾರ್ವಜನಿಕ ಹಿತಾಸಕ್ತಿ ಆಧಾರದ ಮೇಲೆ ಹೈಕೋರ್ಟ್‌ನ ಮೊರೆ ಹೋದರು.

ಇದರ ಫಲವಾಗಿ ಆದಿವಾಸಿಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡಲು ಪ್ರೊ. ಮುಜಾಫರ್ ಅಸಾದಿ ಹೆಸರಿನಲ್ಲಿ ಏಕವ್ಯಕ್ತಿ ಆಯೋಗ ರಚನೆಯಾಯಿತು. ಆ ವರದಿಯನ್ನು ಆಧರಿಸಿ ಹೈಕೋರ್ಟ್ ಆದಿವಾಸಿಗಳ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತು.


ಸ್ಥಳಾಂತರಗೊಂಡ ಆದಿವಾಸಿಗಳಿಗೆ ಪಡಿತರ ಚೀಟಿ ದೊರಕಿಸಿಕೊಟ್ಟು, ಅವರ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿ ತೆರೆದು ಆಹಾರದ ಕೊರತೆ ನೀಗುವಂತೆ ಮಾಡಿದ್ದವರಲ್ಲಿ ಸೋಮಣ್ಣನ ಪಾತ್ರ ಹಿರಿದು. ನಾಗರಹೊಳೆ ದಟ್ಟಾರಣ್ಯದಲ್ಲಿ ನಿರ್ಮಿಸಲು ಹೊರಟಿದ್ದ ಹೋಟೆಲ್ ವಿರುದ್ಧವೂ ಇವರು ಹೋರಾಡಿದ್ದಾರೆ. ಇದರಿಂದ ಇದು ಸ್ಥಗಿತಗೊಂಡಿತು.


ಮೇಧಾ ಪಾಟ್ಕರ್ ಜತೆಗೆ ಸೇರಿ ಸೋಮಣ್ಣ ನರ್ಮದಾ ಬಚಾವ್ ಆಂದೋಲನ, ಪಶ್ಚಿಮಘಟ್ಟ ಉಳಿಸಲು ಕೈಗೊಂಡ ಗೋವಾ- ಕನ್ಯಾಕುಮಾರಿ ಕಾಲ್ನಡಿಗೆ ಜಾಥಾದಲ್ಲೂ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net