

ವಿಜಯವಾಣಿ ಸುದ್ದಿಜಾಲ ಮಂಗಳೂರು
ಲೋಕಸಭೆ ಪ್ರತಿಪಕ್ಷ ನಾಯಕರಾಗಿ, ಎಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಾಮ ಮಾರ್ಗದಲ್ಲಿ ಕಟ್ಟಿ ಹಾಕಲು ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಪಕ್ಷದ ನಾಯಕತ್ವ ವಹಿಸಿದ ಬಳಿಕ ಕಾಂಗ್ರೆಸ್ ಸದೃಢವಾಗಿ ಬೆಳೆದಿದೆ. ಬಳಿಕ ನಡೆದ ಚುನಾವಣೆಗಳಲ್ಲಿ ಪಕ್ಷ ಗೆಲುವಿನ ಹಾದಿ ಹಿಡಿದಿದೆ. ಲೋಕಸಭೆಯಲ್ಲಿ ಖರ್ಗೆ ಅವರು ಕೇಳಿದ ಪ್ರಶ್ನೆಗಳಿಗೆ ನರೇಂದ್ರ ಮೋದಿ ಅವರು ಉತ್ತರ ನೀಡಲಾಗದ ಸ್ಥಿತಿಯಲ್ಲಿ ಇದ್ದಾರೆ. ಜನಸಾಮಾನ್ಯರ ಧ್ವನಿಯಾಗಿ ಖರ್ಗೆ ಅವರು ಹೆಚ್ಚು ಗಮನ ಸೆಳೆದಿದ್ದಾರೆ. ಇದನ್ನು ಸಹಿಸಲಾಗದ ಬಿಜೆಪಿ ಖರ್ಗೆ ಅವರ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದರು.
* ಟೀಕಾಕಾರರು ಜಮೀನು ಹಿಂತಿರುಗಿಸಲಿ:
ಶೈಕ್ಷಣಿಕ ಉದ್ದೇಶಕ್ಕಾಗಿ ಸಿದ್ಧಾರ್ಥ ವಿಹಾರ ಟ್ರಸ್ಟ್ ಜಮೀನು ಹಂಚಿಕೆಯಾಗಿತ್ತು. ರಾಹುಲ್ ಖರ್ಗೆ ಇದರ ಟ್ರಸ್ಟಿಯಾಗಿದ್ದರು. ತನ್ನ ಘನತೆಗೆ ಧಕ್ಕೆ ಬರುತ್ತದೆ ಎಂಬ ಉದ್ದೇಶಕ್ಕೆ ಈ ಜಮೀನನ್ನು ಕೆಐಎಡಿಬಿಗೆ ಮತ್ತೆ ಹಿಂದಿರುಗಿಸಿದ್ದಾರೆ. ಆದರೆ ಛಲವಾದಿ ನಾರಾಯಣ ಸ್ವಾಮಿ ಅವರ ಹೆಸರಿನಲ್ಲಿಯೂ ಇದೇ ರೀತಿ ಐದು ಎಕರೆ ಜಮೀನು ಹಂಚಿಕೆಯಾಗಿದ್ದು, ಅವರು ಅದರಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಖರ್ಗೆ ಕುಟುಂಬ ವಿರುದ್ಧ ಟೀಕಿಸುತ್ತಿರುವ ಅವರೂ ತತ್‌ಕ್ಷಣ ಜಮೀನು ಹಿಂತಿರುಗಿಸಬೇಕು ಎಂದು ಜೈನ್ ಒತ್ತಾಯಿಸಿದರು.
ಛಲವಾದಿಯವರು ಟೀಕೆ ಮಾಡುವಾಗ ತಾನು ಮೊದಲು ಹೇಗಿದ್ದೆ ಎಂಬ ಬಗ್ಗೆ ತಿಳಿದುಕೊಳ್ಳಲಿ. ರಾಜಕೀಯಕ್ಕೆ ಬರುವಾಗ ಯಾರ ಹಿಂದೆ ಓಡಾಡುತ್ತಿದ್ದರು?, ಕಾಂಗ್ರೆಸ್ ಸೇರಿ ಖರ್ಗೆ ಹಿಂದೆ ಓಡಾಡುತ್ತಾ ಅವರ ಮನೆಯ ಗೇಟ್ ಕೀಪರ್ ತರಹ ಇದ್ದರು. ಇದೀಗ ಅವರ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
* ಪಿಎ್ಐ, ಎಸ್‌ಡಿಪಿಐ ಪ್ರಕರಣ ವಾಪಾಸ್
ಕಳೆದ ಅವಧಿ ಬಿಜೆಪಿ ಅಧಿಕಾರದಲ್ಲಿದ್ದಾಗ 385 ಮೊಕದ್ದಮೆಗಳನ್ನು ಹಿಂಪಡೆದಿತ್ತು. ಅದರಲ್ಲೂ ಪಿಎ್ಐ, ಎಸ್‌ಡಿಪಿಐ, ಹಿಂದು ಸಂಘಟನೆಗಳ ಪ್ರಕರಣ ಇತ್ತು. ಇವುಗಳಲ್ಲಿ 127 ಪ್ರಕರಣಗಳನ್ನು ಸರ್ಕಾರದ ಕೊನೆಯ ಮೂರು ತಿಂಗಳು ಅವಧಿಯಲ್ಲಿ ಹಿಂಪಡೆಯಲಾಗಿರುವ ಬಗ್ಗೆ ಡಿಜಿ, ಐಜಿ ಅವರು ಮಾಡಿರುವ ಆಕ್ಷೇಪವನ್ನು ಕೂಡ ಬಿಜೆಪಿ ಸರ್ಕಾರ ನಿರ್ಲಕ್ಷಿಸಿತ್ತು. ನೇರ ರಾಜಕೀಯ ಮಾಡಲು ಸಾಧ್ಯವಾಗದ ಬಿಜೆಪಿ ಧರ್ಮ, ಭಾವನಾತ್ಮಕ ವಿಚಾರ ಮುಂದಿಟ್ಟು ಲಾಭ ಪಡೆಯಲು ಹವಣಿಸುತ್ತಿದೆ. ಪ್ರಸ್ತುತ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 43 ಪ್ರಕರಣ ವಾಪಾಸ್ ಪಡೆಯಲು ಈಗಾಗಲೇ ಸಂಪುಟ ನಿರ್ಧಾರ ಮಾಡಿದೆ. ಇದರಲ್ಲಿ ಬಿಜೆಪಿ ಮುಖಂಡರ ಪ್ರಕರಣವೂ ಇದೆ. 43 ಪ್ರಕರಣಗಳ ಪೈಕಿ ಕೇವಲ ಹುಬ್ಬಳ್ಳಿ ಗಲಭೆ ಪ್ರಕರಣವನ್ನಿಟ್ಟು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನೀರಜ್ ಪಾಲ್, ಆಲ್ವಿನ್ ಡಿಸೋಜ ಉಪಸ್ಥಿತರಿದ್ದರು.