ಮಿಶ್ರ ಕೃಷಿಯಲ್ಲಿ ಯಶ ಕಂಡ ಪಡಿಯಪ್ಪ

RON FARMER PADIYAPPA
Published on

ರೋಣ: ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿ ಪಡಿಯಪ್ಪ ಪೂಜಾರ ಅವರು ಮಿಶ್ರ ಬೇಸಾಯ ಪದ್ಧತಿ ಜತೆಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ.

ಒಟ್ಟು 3 ಎಕರೆ ಕೃಷಿ ಭೂಮಿಯಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ತೋಟ ಮಾಡಿಕೊಂಡು ಬದುವಿನ ಸುತ್ತಲೂ 200 ಟೆಂಗಿನ ಮರಗಳನ್ನು ಬೆಳೆಸಿದ್ದಾರೆ. 800 ಮಹಾಗಣಿ, 800 ಪೇರಲ, 800 ಲಿಂಬು, 10 ಚಿಕ್ಕು, 5 ಸೀತಾಫಲ, 25 ಮಾವು, 5 ಕರಿಬೇವು, 5 ಅರಳಿ ಮರ, 150 ಹೆಬ್ಬೇವು, 5 ಸಾಗವಾನಿ ಹಾಗೂ 5 ಹಲಸಿನ ಮರಗಳನ್ನು ಬೆಳೆಸಿದ್ದಾರೆ. ಕೃಷಿ ಹೊಂಡದ ಸುತ್ತಲೂ ಬಾಳೆ ಗಿಡಗಳು ಸೇರಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ವರ್ಷವಿಡೀ ಆದಾಯಕ್ಕೆ ದಾರಿ ಕಂಡುಕೊಂಡಿದ್ದಾರೆ.

ಉಳಿದ ಅರ್ಧ ಎಕರೆಯಲ್ಲಿ ಮೆಣಸಿನಕಾಯಿ, ಉಳ್ಳಾಗಡ್ಡಿ, ಜೋಳ, ಹುರಳಿ ಬೆಳೆಯುತ್ತಾರೆ. ಅದರಲ್ಲಿಯೇ ಬದನೆಕಾಯಿ, ಬೆಂಡೆಕಾಯಿ, ಹಿರೇಕಾಯಿ, ಚಳ್ಳಾರಿಕಾಯಿ ಮತ್ತು ವಿವಿಧ ತರಕಾರಿ ಬೆಳೆಯುತ್ತಿದ್ದಾರೆ. ಬೇಸಿಗೆ ಕಾಲವಾಗಿದ್ದರಿಂದ ಲಿಂಬು ಹಣ್ಣಿಗೆ ಎಲ್ಲಿಲ್ಲದ ಬೇಡಿಕೆಯಿದ್ದು, 800 ಲಿಂಬು ಗಿಡಗಳಿಂದ ತಿಂಗಳಿಗೆ 20 ಸಾವಿರ ರೂಪಾಯಿಗಳಿಗೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಸಾವಯವ ಕೃಷಿ ಹಾಗೂ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿರುವ ಪಡಿಯಪ್ಪ ಅವರು, ವರ್ಷಕ್ಕೆ 8ರಿಂದ 10 ಲಕ್ಷ ರೂ.ಗಳ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಕುರಿ, ಕೋಳಿ ಸಾಕಣೆ:

80 ನಾಟಿ ಕೋಳಿಗಳು, 8 ಕುರಿ, 3 ಮೇಕೆ, 1 ಟಗರು, 3 ಎಚ್.ಎಫ್ ಹಸುಗಳನ್ನು ಸಾಕಿಕೊಂಡಿರುವ ಪಡಿಯಪ್ಪ, ಹೈನುಗಾರಿಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಆಡು, ಮೇಕೆಗಳ ಮೇವಿಗಾಗಿ 4 ಗುಂಟೆಯಲ್ಲಿ ಹಿಪ್ಪು ನೇರಳೆ ಬೆಳೆದಿದ್ದಾರೆ.

ಸಾವಯವ ಗೊಬ್ಬರ ಬಳಕೆ:

ತೋಟ ಹಾಗೂ ಹೊಲಕ್ಕೆ ಪಡಿಯಪ್ಪ ಅವರು ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಬದಲಾಗಿ ಸಾವಯವ ಗೊಬ್ಬರವನ್ನೇ ಬಳಕೆ ಮಾಡುತ್ತಿದ್ದಾರೆ. ಸಾವಯವ ಗೊಬ್ಬರ ಘಟಕಗಳನ್ನು ನಿರ್ವಿುಸಿ ಅದನ್ನೇ ಹೊಲ ಹಾಗೂ ತೋಟಗಳಿಗೆ ಬಳಕೆ ಮಾಡಿಕೊಂಡು ಬಂಪರ್ ಬೆಳೆ ಮತ್ತು ವರಮಾನವನ್ನು ಪಡೆಯುತ್ತಿದ್ದಾರೆ.

ಕಡಿಮೆ ಖರ್ಚು, ಕಡಿಮೆ ನೀರು ಬಳಕೆ ಮಾಡಿ ಹೆಚ್ಚು ಹೆಚ್ಚು ಮಿಶ್ರ ಬೆಳೆಗಳನ್ನು ಬೆಳೆಯಬೇಕು. ರಾಸಾಯನಿಕ ರಸಗೊಬ್ಬರಗಳ ಬದಲಿಗೆ ಪಡಿಯಪ್ಪ ಅವರಂತೆ ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚೆಚ್ಚು ಬೆಳೆ ಬೆಳೆದು ಪ್ರಗತಿ ಹೊಂದಬೇಕು. | ಗಿರೀಶ ಹೊಸೂರ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ ಮೂರು ಲಕ್ಷ ರೂ.ಗಳನ್ನು ವ್ಯಯಿಸಿ ದನದ ದೊಡ್ಡಿ, ಶೌಚಗೃಹ ಹಾಗೂ ಎರೆಹುಳು ಘಟಕಗಳನ್ನು ನಿರ್ವಿುಸಿಕೊಂಡಿದ್ದೇನೆ. ಆದರೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಣ ನೀಡದೆ ಸತಾಯಿಸುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳಿಂದ ಸೂಕ್ತ ಸಹಾಯ ದೊರೆತಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೃಷಿಯಲ್ಲಿ ಪ್ರಗತಿ ಸಾಧಿಸಬಹುದು. | ಪಡಿಯಪ್ಪ ಪೂಜಾರ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net