ಪಡಿತರ ವಿತರಣೆಯಲ್ಲಿ ಮೋಸ ತಡೆಯಲು ತಂಡ ರಚಿಸಿ

7-klr-13 Alternative
Published on
ಕೋಲಾರ: ಕರೊನಾದಂತಹ ಸಂಕಷ್ಟ ಸಂದರ್ಭದಲ್ಲೂ ಬಡವರಿಗೆ ನೀಡುವ ಪಡಿತರದಲ್ಲಿ ಮೋಸ ಮಾಡಬೇಡಿ, ಜಿಲ್ಲೆಯಲ್ಲಿ 20 ತಂಡಗಳನ್ನು ರಚಿಸಿಕೊಂಡು ತಪಾಸಣೆ ನಡೆಸಿ, ಅಕ್ರಮ ಕಂಡುಬಂದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ. ಗೋಪಾಲಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಆಹಾರ ನಿಗಮದ ಗೋದಾಮು, ಇಲಾಖೆಯ ಗೋದಾಮುಗಳಿಂದ ಪಡಿತರ ಎತ್ತುವಳಿಯಲ್ಲಿ ತೂಕದಲ್ಲಿ ಮೋಸ, ಆಹಾರದಲ್ಲಿ ಕಳಪೆ ಗುಣಮಟ್ಟ  ಕಂಡುಬಂದಲ್ಲಿ ತಕ್ಷಣ  ಕ್ರಮವಹಿಸಬೇಕು, ಪಡಿತರದಾರರಿಗೆ ಕಳಪೆ ಆಹಾರ ವಿತರಿಸಬಾರದು ಎಂದರು.
ತೂಕದಲ್ಲಿ ಮೋಸ, ಹಣ ವಸೂಲಿ ಮಾಡುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಪಡಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಇಲಾಖೆ ಅಧಿಕಾರಿಗಳ ಜತೆಗೆ ತಹಸೀಲ್ದಾರ್‌ಗಳು 20 ತಂಡ ರಚಿಸಿಕೊಂಡು ತಪಾಸಣೆ ನಡೆಸಿ ಅಕ್ರಮಕ್ಕೆ ಕಡಿವಾಣ ಹಾಕಿ, ಇದರಿಂದ ಜಿಲ್ಲಾಡಳಿತ, ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದರು.
ಹತ್ತಿರದ ಶಾಲೆಯಲ್ಲಿ ವಿತರಿಸಿ: ನ್ಯಾಯಬೆಲೆ ಅಂಗಡಿ 3-4 ಕಿಮೀ ದೂರವಿರುವ ಗ್ರಾಮಸ್ಥರಿಗೆ ಆಯಾ ಊರಿನಲ್ಲೇ ಪಡಿತರ ವಿತರಿಸಬೇಕೆಂಬ ಶಾಸಕ ಕೆ.ವೈ. ನಂಜೇಗೌಡರ ಬೇಡಿಕೆಗೆ ಸ್ಪಂದಿಸಿದ ಸಚಿವರು, ಕರೊನಾ ಮುಗಿಯುವವರೆಗೆ ಊರಿನ ಶಾಲೆಯವರೆಗೆ ಪಡಿತರ ತಲುಪಿಸಲು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಆದೇಶಿಸುತ್ತೇನೆ ಎಂದರು.
ಡಿಸಿ ಸಿ.ಸತ್ಯಭಾಮ ಮಾತನಾಡಿ, ಜಿಲ್ಲೆಯಲ್ಲಿ ಪಡಿತರಕ್ಕೆ ಅರ್ಜಿ ಸಲ್ಲಿಸಿದವರಿಗೆ, ವೃದ್ಧಾಶ್ರಮಗಳಿಗೆ, ಪಡಿತರಕ್ಕೆ ಬೇಡಿಕೆ ಸಲ್ಲಿಸಿದವರಿಗೆ ಹಾಗೂ ಲಾಕ್‌ಡೌನ್ ಆರಂಭದಲ್ಲಿ 4000 ವಲಸೆ ಕಾರ್ಮಿಕರಿಗೆ ಪಡಿತರ ನೀಡಲಾಗಿದೆ. ಈಗ ವಲಸೆ ಕಾರ್ಮಿಕರ ಗುತ್ತಿಗೆದಾರರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.
ಶಾಸಕ ಕೆ.ಆರ್.ರಮೇಶ್‌ಕುಮಾರ್ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ಹೊಂದಾಣಿಕೆ ಕೆ. ಗೋಪಾಲಯ್ಯ ಸಚಿವರಾದ ನಂತರ ನಡೆಯುತ್ತಿರುವುದಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕಷ್ಟಕಾಲದಲ್ಲಿ ಯಾರಿಗೂ ತೊಂದರೆ ಕೊಡುವುದು ಬೇಡ ಎಂದು ಸಲಹೆ ನೀಡಿದರು.
ಗೋದಾಮಿಗೆ ಭೇಟಿ: ನಗರ ಹೊರವಲಯದ ಗದ್ದೆಕಣ್ಣೂರು ಗ್ರಾಮದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೊದಾಮಿಗೆ ತೆರಳಿದ ಸಚಿವ ಕೆ.ಗೋಪಾಲಯ್ಯ ಅಕ್ಕಿ ದಾಸ್ತಾನು ಪರಿಶೀಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯರಾದ ಆರ್.ಚೌಡರೆಡ್ಡಿ, ನಜೀರ್ ಅಹಮದ್, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ, ಜಿಪಂ ಸಿಇಒ ಎಚ್.ದರ್ಶನ್, ತಹಸೀಲ್ದಾರ್ ಶೋಭಿತಾ, ಆಹಾರ ಇಲಾಖೆ ಉಪನಿರ್ದೇಶಕ ನಾಗರಾಜ ಕೆಳಗಿನಮನಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ವೈ. ಶಿವಣ್ಣ ಇತರರಿದ್ದರು.

ಬಡವರಿಗೆ ಪಡಿತರ ವಿತರಣೆಯಲ್ಲಿ ತೂಕದಲ್ಲಿ ಮೋಸ, ಹಣ ಪಡೆದಿರುವ ಸಂಬಂಧ 146 ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಲಾಗಿದೆ.  ಹಿಂದೆ ಹೇಗಿತ್ತೋ ಗೊತ್ತಿಲ್ಲ. ನನ್ನ ಅವಧಿಯಲ್ಲಿ ಇಲಾಖೆಯನ್ನು ಒಂದು ಹಂತಕ್ಕೆ ತರಲು ಸಿಎಂ ಜವಾಬ್ದಾರಿ ನೀಡಿದ್ದಾರೆ. ಯಾವುದೇ ರೀತಿಯ ಲೋಪ ಸಹಿಸಲ್ಲ.   ಕೆ. ಗೋಪಾಲಯ್ಯ, ಸಚಿವ

ಕ್ರಮಕ್ಕೆ ಸೂಚನೆ: ಮುಳಬಾಗಲು ತಾಲೂಕಿನ ಬೈರಕೂರು ಸೊಸೈಟಿಯಲ್ಲಿ ಪಡಿತರದಲ್ಲಿ ಅಕ್ರಮ, ಪ್ರತಿ ಕಾರ್ಡ್‌ಗೆ 3 ರೂ. ನಿಗದಿಪಡಿಸಿ ವಸೂಲಿ ಮಾಡಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net