ಸತ್ಯ ನಿಷ್ಠುರತೆಗೆ ಪ್ರಶಸ್ತಿ ಗೌರವ: ಪಾದೂರು ಗುರುರಾಜ ಭಟ್ ಪ್ರಶಸ್ತಿ ಸ್ವೀಕರಿಸಿ ಪುರಾತತ್ವಜ್ಞ ಕೆ.ಕೆ. ಮಹಮ್ಮದ್ ಹೇಳಿಕೆ

padhuru new
Published on

ಉಡುಪಿ: ವೃತ್ತಿ ಜೀವನದಲ್ಲಿ 100ಕ್ಕೂ ಅಧಿಕ ಪ್ರಾಚೀನ ದೇವಸ್ಥಾನಗಳ ಉತ್ಖನನ ಮಾಡಿದ್ದೇನೆ. ಸತ್ಯನಿಷ್ಠುರವಾಗಿ ಕಾರ್ಯ ನಿರ್ವಹಿಸಿದ್ದರಿಂದ ಅನೇಕ ಪ್ರಶಸ್ತಿಗಳು ಅರಿಸಿ ಬಂದಿವೆ. ಅದೆಲ್ಲ ಹಣವನ್ನು ಸಮಾಜಸೇವೆಗೆ ಬಳಸಿದ್ದೇನೆ. ಇಂದಿನ ಪ್ರಶಸ್ತಿ ಮೊತ್ತ 1 ಲಕ್ಷ ರೂಪಾಯಿಯನ್ನು ಕೇರಳದಲ್ಲಿ ಪ್ರಾಚೀನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ವಿಯೋಗಿಸಲಾಗುವುದು ಎಂದು ಪದ್ಮಶ್ರೀ ಪುರಸ್ಕೃತ ಪುರಾತತ್ವ ಮತ್ತು ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ನಿವೃತ್ತ ಅಧಿಕಾರಿ ಕೆ.ಕೆ. ಮಹಮ್ಮದ್ ಹೇಳಿದರು.

ಭಾನುವಾರ ವಿದ್ಯೋದಯ ಶಾಲಾ ಸಭಾಂಗಣದಲ್ಲಿ ಡಾ. ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನೀಡಿದ ಡಾ. ಪಾದೂರು ಗುರುರಾಜ ಭಟ್ ಸಂಸ್ಮರಣಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಮಧ್ಯಪ್ರದೇಶದ ಚಂಬಲ್ ಕಣಿವೆಯ ಬಟಕೇಶ್ವರದಲ್ಲಿ ನಡೆದ ಉತ್ಖನನವು ವೃತ್ತಿ ಜೀವನದಲ್ಲಿ ಸದಾ ನೆನಪಿಡುವಂತದ್ದು. ಇಲ್ಲಿ ಡಕಾಯಿತರ ಮುಖಂಡ ನಿರ್ಭಯ ಸಿಂಗ್ ಗುಜ್ಜರ್ ಮನವೊಲಿಸಿ ಅನುಮತಿ ಪಡೆದು ಸುಮಾರು 8 ದೇವಸ್ಥಾನಗಳ ಉತ್ಖನನ ನಡೆಸಲಾಗಿತ್ತು ಎಂದು ಮಹಮ್ಮದ್ ವೃತ್ತಿ ಜೀವನವನ್ನು ಸ್ಮರಿಸಿದರು.

ಆಶೀರ್ವಚನ ನೀಡಿದ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಜಿಲ್ಲೆಯಲ್ಲಿ ಪ್ರಾಚೀನ ದೇವಾಲಯಗಳ ಇತಿಹಾಸ ಸಂಶೋಧನೆ ಕ್ಷೇತ್ರದಲ್ಲಿ 100 ಜನ ಮಾಡಬಹುದಾದ ಕಾರ್ಯವನ್ನು ಗುರುರಾಜ ಭಟ್ ಒಬ್ಬರೇ ಮಾಡಿದ್ದಾರೆ ಎಂದು ಹೇಳಿದರು.

ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಂಗಳೂರು ವಿವಿಯಲ್ಲಿ ಪಾದೂರು ಗುರುರಾಜ ಭಟ್ ಅವರ ಹೆಸರಿನಲ್ಲಿ ಸಂಶೋಧನಾ ಪೀಠ ಸ್ಥಾಪನೆಗೆ ಬೇಡಿಕೆ ಇದೆ. ವ್ಯವಸ್ಥಿತವಾಗಿ ಪೀಠವನ್ನು ನಡೆಸುವ ಬಗ್ಗೆ ವರದಿ ನೀಡಿದರೆ ಸರ್ಕಾರದಿಂದ ವಾರದೊಳಗೆ ಅನುದಾನ ಮಂಜೂರು ಮಾಡಲಾಗುವುದು ಎಂದರು.

ಶಾಸಕ ರಘುಪತಿ ಭಟ್, ಮಂಗಳೂರು ವಿವಿ ನಿವೃತ್ತ ಉಪಕುಲಪತಿ ಪ್ರೊ.ಕೆ.ಭೈರಪ್ಪ, ಡಾ. ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷೆ ಪಾರ್ವತಿ ಭಟ್ ಉಪಸ್ಥಿತರಿದ್ದರು.

ಟ್ರಸ್ಟ್ ಚೇರ್ಮನ್ ಪ್ರೊ. ಶ್ರೀಪತಿ ತಂತ್ರಿ ಸ್ವಾಗತಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

ರಾಜಕಾರಣಿಗಳ ಮನವೊಲಿಕೆ ಕಷ್ಟ!

ಆಶೀರ್ವಚನ ನೀಡಿದ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಭೂಮಿಯನ್ನು ‘ದೇವತೆಗಳ ದುಡ್ಡಿನ ಪೆಟ್ಟಿಗೆ’ ಎಂದು ಕರೆಯಲಾಗುತ್ತದೆ. ಅದನ್ನು ಉತ್ಖನನ ನಡೆಸಿ ಮಹಮ್ಮದ್ ಅವರು ರಾಮಮಂದಿರಕ್ಕೆ ಸಾಕ್ಷೃವನ್ನು ನೀಡಿದ್ದಾರೆ. ಸುಪ್ರೀಂ ಕೋರ್ಟ್ ಸರ್ವ ಸಮ್ಮತಿಯಲ್ಲಿ ತೀರ್ಪು ನೀಡಿದರೂ ಕೆಲವು ಜನನಾಯಕರು ವಿವಾದಿತ ಪ್ರದೇಶ ಎನ್ನುತ್ತಾರೆ. ಚಂಬಲ್ ಕಣಿವೆಯ ಡಕಾಯಿತರನ್ನು ಬೇಕಾದರೂ ಮನವೊಲಿಸಬಹುದು. ಆದರೆ ರಾಜಕಾರಣಿಗಳ ಮನವೊಲಿಕೆ ಕಷ್ಟ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net