

ಕೋಟ: ರಾಜ್ಯದ ಬಿಜೆಪಿ ಸರ್ಕಾರದ ನೂತನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭಿಮಾನಿಗಳು ಕೋಟದಿಂದ ಮಾರಣಕಟ್ಟೆಗೆ ಪಾದಯಾತ್ರೆ ನಡೆಸಿದರು.
ಗುರುವಾರ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಿಂದ ಮುಂಜಾನೆ ಹೊರಟು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿ ದೇವರಿಗೆ ಪೂಜೆ ಸಲ್ಲಿಸಿದರು.
ಸಚಿವರ ಆಪ್ತ ಸಹಾಯಕ ಹರೀಶ್ ಶೆಟ್ಟಿ, ರಂಜಿತ್ ಪೂಜಾರಿ, ಪ್ರಸಾದ್ ಬಿಲ್ಲವ, ಮಹೇಶ್ ಹಟ್ಟಿಕುದ್ರು, ಸಾಯಿಕುಮಾರ್, ಸಮೇತ ಹಲವು ಮಂದಿ ಕೋಟ ಅಭಿಮಾನಿಗಳಿದ್ದರು. ಶ್ರೀನಿವಾಸ ಪೂಜಾರಿ ಮತ್ತೆ ಸಚಿವರಾದರೆ ಅವರ ಊರಿನಿಂದ ಮಾರಣಕಟ್ಟೆ ದೇವಸ್ಥಾನಕ್ಕೆ ಪಾದಯಾತ್ರೆ ಮಾಡಿ ದೇವರಿಗೆ ಪೂಜೆ ಸಲ್ಲಿಸುತ್ತೇವೆ ಎಂಬ ಸಂಕಲ್ಪ ಮಾಡಿದ್ದು, ಅದರಂತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಈ ಹರಕೆ ಸಮರ್ಪಿಸಿದ್ದೇವೆ ಎಂದು ಅವರ ಅಭಿಮಾನಿಗಳು ತಿಳಿಸಿದ್ದಾರೆ.