ನದಿ ಪಾತ್ರದ ಗದ್ದೆಗಳ ರೈತರು ಮಳೆಯಾದ್ರೂ ಭತ್ತ ಬೆಳೆಯವಂತಿಲ್ಲ!

web 1
Published on

ಬಣಕಲ್: ಮೂಡಿಗೆರೆ ತಾಲೂಕಿನಾದ್ಯಂತ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಆದರೆ ನದಿ ಪಾತ್ರದ ಗದ್ದೆಗಳ ರೈತರಿಗೆ ಮಾತ್ರ ಉತ್ತಮ ಮಳೆಯಾದರೂ ಗದ್ದೆ ಉಳುಮೆ ಮಾಡಲು ಸಾಧ್ಯವಾಗುತ್ತಿಲ್ಲ.

ಕಳೆದ ವರ್ಷದ ಮಳೆಗಾಲದಲ್ಲಿ ಮೂಡಿಗೆರೆ ತಾಲೂಕು ನೆರೆ ಪ್ರವಾಹದಿಂದ ತತ್ತರಿಸಿ ಹೋಗಿತ್ತು. ಹಲವರು ನೆರೆಯಿಂದ ಪ್ರಾಣ ಕಳೆದುಕೊಂಡಿದ್ದರು. ಅಪಾರ ಪ್ರಮಾಣ ಕೃಷಿ ಭೂಮಿ ನಾಶವಾಗಿತ್ತು. ನದಿಪಾತ್ರದ ನೂರಾರು ಎಕರೆ ಭತ್ತದ ಗದ್ದೆ, ಕಾಫಿ ತೋಟಗಳಲ್ಲಿ ನದಿಯ ಮರಳು ತುಂಬಿಹೋಗಿತ್ತು.

ಕೃಷಿ ಭೂಮಿಯಲ್ಲಿ ನಿಂತ ಮರಳನ್ನು ತೆಗೆಯಲು ತಾಲೂಕಿನ ನೂರಾರು ರೈತರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲವು ರೈತರಿಗೆ ಈ ವರ್ಷದ ಮಾರ್ಚ್ ಅಂತ್ಯದವರೆಗೆ ಮರಳು ತೆಗೆಯಲು ಅನುಮತಿ ನೀಡಿದರೂ ಕರೊನಾ ಲಾಕ್​ಡೌನ್ ಘೊಷಿಸಿದ್ದರಿಂದ ಮರಳು ತೆಗೆಯಲು ಸಾಧ್ಯವಾಗಿಲ್ಲ. ಈಗ ಮರಳು ತೆಗೆಯಲು ನೀಡಿದ ಅನುಮತಿಯೂ ಮುಗಿದಿದೆ.

ಶುಲ್ಕ ಕಟ್ಟಿದರೂ ಪ್ರಯೋಜನವಿಲ್ಲ : ಬಣಕಲ್​ನ ಗುಡ್ಡಟ್ಟಿಯ ಲೋಕಯ್ಯ ಎಂಬುವರು ತಮ್ಮ 2.3 ಎಕರೆ ಗದ್ದೆಯಲ್ಲಿ ಸಂಗ್ರಹವಾಗಿರುವ ಮರಳನ್ನು ಸಾಗಿಸಲು ಅನುಮತಿ ನೀಡುವಂತೆ ಫೆಬ್ರವರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೃಷಿ ಜಮೀನಿನಲ್ಲಿ ಸಂಗ್ರಹವಾದ ಮರಳನ್ನು ಸಾಗಿಸಲು ಮರಳಿನ ಪ್ರಮಾಣಕ್ಕೆ ನಿಗದಿಪಡಿಸಿದ ರಾಜಧನ, ಹೆಚ್ಚುವರಿ ನಿಯತಕಾಲಿಕ ಶುಲ್ಕ, ಡಿಎಂಎಫ್, ಟಿಡಿಎಸ್, ಪ್ರೊಸೆಸ್ಸಿಂಗ್ ಶುಲ್ಕ ಮತ್ತು ಎಸ್​ಎಸ್​ಪಿಪಿ ಶುಲ್ಕ ಸೇರಿ ಒಟ್ಟು 20 ಸಾವಿರ ರೂ. ಸಂದಾಯ ಮಾಡಿಸಿಕೊಂಡು ಮಾ.12ರಿಂದ 31ರವರೆಗೆ ಮರಳು ಸಾಗಣೆಗೆ ಅನುಮತಿ ನೀಡಿತ್ತು. ಕರೊನಾ ತಡೆಗೆ ಸರ್ಕಾರ ಮಾರ್ಚ್​ನಲ್ಲಿ ಲಾಕ್​ಡೌನ್ ಘೊಷಿಸಿದ್ದರಿಂದ ಕೃಷಿ ಭೂಮಿಯಲ್ಲಿದ್ದ ಮರಳನ್ನು ತೆಗೆಯಲು ಸಾಧ್ಯವಾಗಿಲ್ಲ. ಈಗ ಅನುಮತಿ ನೀಡಿದ ಅವಧಿಯೂ ಮುಗಿದಿರುವುದರಿಂದ ಮರಳು ತೆಗೆಯಲು ಸಾಧ್ಯವಾಗದೆ ರೈತ ಲೋಕಯ್ಯ ಕೈಚೆಲ್ಲಿ ಕುಳಿತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net