

ಗಂಗಾವತಿ: ಭತ್ತದ ಖರೀದಿ ಕೇಂದ್ರ ತೆರೆಯುವುದರ ಜತೆಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ಒತ್ತಾಯಿಸಿ ನಗರದ ಮಡಿವಾಳ ವೃತ್ತದಿಂದ ಮಿನಿವಿಧಾನಸೌಧದವರಿಗೆ ಶನಿವಾರ ಪ್ರತಿಭಟನೆ ರ‌್ಯಾಲಿಯಲ್ಲಿ ತೆರಳಿದ ಕಾರಟಗಿ ಮತ್ತು ಕನಕಗಿರಿ ಬ್ಲಾಕ್‌ನ ಕಾಂಗ್ರೆಸ್ ಕಾರ್ಯಕರ್ತರು ತಹಸೀಲ್ದಾರ್ ಎಂ.ರೇಣುಕಾರಿಗೆ ಮನವಿ ಸಲ್ಲಿಸಿದರು.
ಮಾಜಿ ಸಂಸದ ಎಸ್.ಶಿವರಾಮನಗೌಡ ಹಾಗೂ ಕಾಂಗ್ರೆಸ್ ಕನಕಗಿರಿ ಬ್ಲಾಕ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಭತ್ತದ ಇಳುವರಿ ಕಡಿಮೆಯಾಗಿದ್ದು, ಬೆಲೆಯೂ ಕುಸಿದಿದೆ. ಖರೀದಿ ಕೇಂದ್ರ ಆರಂಭಿಸಬೇಕಿದ್ದ ರಾಜ್ಯ ಸರ್ಕಾರ ಇದುವರೆಗೂ ಕ್ರಮ ಕೈಗೊಳ್ಳುತ್ತಿಲ್ಲ. ಶೇ.50 ಕೊಯ್ಲು ಪೂರ್ಣಗೊಂಡಿದ್ದು, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಎಲ್ಲ ಹೋಬಳಿ ವ್ಯಾಪ್ತಿಯಲ್ಲಿ ಖರೀದಿ ಕೇಂದ್ರ ಆರಂಭದ ಜತೆಗೆ ಬೆಂಬಲ ಬೆಲೆ ಕ್ವಿಂಟಾಲ್‌ಗೆ 2500ರೂ. ದರ ನಿಗದಿಗೊಳಿಸಬೇಕು. ಭತ್ತ ಕೊಯ್ಯುವ ಯಂತ್ರಕ್ಕೆ 1900ರೂ. ಬಾಡಿಗೆ ಫಿಕ್ಸ್ ಮಾಡುವಂತೆ ಒತ್ತಾಯಿಸಿದರು.
ಮನವಿ ಪತ್ರ ನೀಡುವ ಸಂದರ್ಭದಲ್ಲಿ ನೂಕುನುಗ್ಗಲುಂಟಾಗಿದ್ದು, ಸಾಮಾಜಿಕ ಅಂತರ ಮರೀಚಿಕೆಯಾಗಿತ್ತು. ತಾಪಂ ಅಧ್ಯಕ್ಷ ಮಹ್ಮದ್ ರಫೀ, ಸದಸ್ಯರಾದ ಬಿ.ಕೀರಪ್ಪ, ಶಂಭಣ್ಣ ಅಳ್ಳಳ್ಳಿ, ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ, ಮುಖಂಡರಾದ ಅಂಬಣ್ಣ ನಾಯಕ, ವಿಶ್ವನಾಥ ಮಾಲಿ ಪಾಟೀಲ್, ಎಚ್.ಎಂ.ಶೈಲಜಾ, ಬಸವರಾಜ ಸ್ವಾಮಿ ಮಳೀಮಠ, ರಾಜುನಾಯಕ, ಖಾಜಾಸಾಬ್, ಶರಣೇಗೌಡ ಪೊ.ಪಾಟೀಲ್,ಕೆ.ಪ್ರಸಾದ, ರುದ್ರೇಶ ಡ್ಯಾಗಿ, ರಮೇಶ ಕುಲ್ಕರ್ಣಿ, ಸುಬ್ರಮಣ್ಯ ಇತರರಿದ್ದರು.