

ಸಿದ್ದಾಪುರ: ಮಕ್ಕಳಿಗೆ ಡಾಕ್ಟರಾಗು,ಇಂಜಿನಿಯರಾಗು, ಡಿಸಿ ಆಗು ಎಂದು ಹೇಳಿ ಕೊಡುತ್ತೇವೆ. ಆದರೆ, ಎಲ್ಲರಿಗೂ ಬೇಕಾದ ಅನ್ನ ಕೊಡುವ ರೈತನಾಗು ಎಂದು ಹೇಳುವವರು ಯಾರೂ ಇಲ್ಲ. ಇದರಿಂದ ಇಂದಿನ ಮಕ್ಕಳು ಕೃಷಿಯಿಂದ ದೂರವಾಗುತ್ತಿದ್ದಾರೆ. ಕೃಷಿ ನಶಿಸುತ್ತಿದೆ. ಇಂಥ ಸಂದರ್ಭದಲ್ಲಿ ಸಿದ್ದಾಪುರದ ಹುಲ್ಕುತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಯತ್ನ ನಡೆಸಿದೆ.
ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಭತ್ತದ ಗದ್ದೆಯ ನಾಟಿ, ಕೊಯ್ಲು ಹಾಗೂ ಭತ್ತವನ್ನು ಒಕ್ಕುವ ಕಾರ್ಯವನ್ನು ನಡೆಸುತ್ತಿದೆ. ಈ ವರಷವೂ ನಾಟಿ ಕಾರ್ಯ ನಡೆಯಿತು. ಶಾಲೆಯ 4 ಹಾಗೂ 5 ನೇ ತರಗತಿಯ 13 ವಿದ್ಯಾರ್ಥಿಗಳು ಗದ್ದೆ ನಾಟಿ ಮಾಡುವ ಅನುಭವ ಪಡೆದರು.
ಹೆಂಜನಿಯ ಲೋಕೇಶ ಪದ್ಮನಾಭ ಗೌಡ ಅವರ 6 ಗುಂಟೆ ಗದ್ದೆಯಲ್ಲಿ 1 ತಾಸಿನಲ್ಲಿ ನಾಟಿ ಮಾಡಿ ಮುಗಿಸಿದರು. ಕೃಷಿಕರಾದ ಶ್ವೇತಾ ಲೋಕೇಶ ಗೌಡ ಹಾಗೂ ಲಕ್ಷ್ಮಿ ಈಶ್ವರ ಗೌಡ ಇವರು ಸಸಿ ನೆಡುವ ವಿಧಾನವನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಿಗೆ ಮುಂದೆ ಗದ್ದೆ ಕೊಯ್ಲು ಹಾಗೂ ಭತ್ತ ಸೆಳೆಯುವ ಕಾರ್ಯವನ್ನೂ ಪ್ರಾಯೋಗಿಕವಾಗಿ ತಿಳಿಸಿಕೊಡುವುದಾಗಿ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ತಿಳಿಸಿದ್ದಾರೆ.