ಮಾ.4ರಂದು ಕೊತ್ತತ್ತಿಯಲ್ಲಿ ಭತ್ತ ನಾಟಿ ಕಾರ್ಯಕ್ರಮ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಗಣ್ಯರು ಭಾಗಿ

Paddy planting program in Kottatti Mandya
Published on

ಮಂಡ್ಯ: ಶ್ರೀರಂಗಟಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ಮಾ.4ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭತ್ತ ನಾಟಿ ಹಾಕಲಿದ್ದಾರೆ. ವಿಶೇಷ ಕಾರ್ಯಕ್ರಮಕ್ಕೆಂದು ಸಿದ್ಧತೆ ಮಾಡಿಕೊಳ್ಳಲಾಗಿದೆ.

ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಬೆಳಗ್ಗೆ 10ಗಂಟೆಗೆ ಬಿ.ವೈ.ವಿಜಯೇಂದ್ರ ಅವರನ್ನು ನಗರದ ಹೊರವಲಯದಿಂದ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆದುಕೊಂಡು ಹೋಗಲಾಗುವುದು. ಈ ವೇಳೆ ಬೈಕ್ ರ‌್ಯಾಲಿ ಸೇರಿದಂತೆ ಸಹಸ್ರಾರೂ ಜನರು ಭಾಗಿಯಾಗಲಿದ್ದಾರೆ.

ಕೊತ್ತತ್ತಿ ಗ್ರಾಮದ ಹೊರವಲಯದಲ್ಲಿ ರೈತರಾದ ಸುಖೇಂದ್ರ ಮತ್ತು ಶಿವಬಸಪ್ಪ ಅವರ ಜಮೀನಿನಲ್ಲಿ ಭತ್ತದ ನಾಟಿ ಮಾಡಲಾಗುವುದು. ಬಳಿಕ ರೈತ ಮಹಿಳೆಯರಿಗೆ ಸನ್ಮಾನ ಸಮಾರಂಭ ಹಾಗೂ ರೈತರೊಂದಿಗೆ ಸಂವಾದ ನಡೆಯಲಿದೆ. ಈ ವೇಳೆ ಬೊಮ್ಮನಹಳ್ಳಿ ಶಾಸಕ ಸತೀಶ್‌ರೆಡ್ಡಿ, ಮಾಜಿ ಸಚಿವರಾದ ಕೆ.ಸಿ.ನಾರಾಯಣಗೌಡ, ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಅಂತೆಯೇ ಕಾರ್ಯಕ್ರಮಕ್ಕೆ 6 ರಿಂದ 7 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕೊತ್ತತ್ತಿ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ವಿಶೇಷವಾಗಿ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ದೇವಾಲಯ ಕಾರ್ಯ ಹಾಗೂ ಹಬ್ಬ ಹರಿದಿನಗಳಲ್ಲಿ ನಡೆಯುವಂತೆ ರಾಗಿ ಮುದ್ದೆ-ಅವರೆಕಾಳು ಕೂಟು, ಅನ್ನ-ಸಾಂಬಾರ್ ಊಟದ ವ್ಯವಸ್ಥೆ ಇರಲಿದೆ.

ಒಂದೂವರೆಯಿಂದ ಎರಡು ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯಕ್ರಮ ನಡೆಯಲಿದೆ. ಮಾ.4ರಂದು ನಾಟಿಯಾಗಲಿರುವ ಭತ್ತ ಕೊಯ್ಲಿಗೆ ಬಂದಾಗ ಪುನಃ ನಮ್ಮ ಇದೇ ನಾಯಕರು ಕೊಯ್ಲು ಪ್ರಕ್ರಿಯೆಯಲ್ಲೂ ಭಾಗವಹಿಸುವರು ಎಂದು ಇಂಡುವಾಳು ಸಚ್ಚಿದಾನಂದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net