

ವಿಜಯವಾಣಿ ಸುದ್ದಿಜಾಲ ಸುಳ್ಯ
ಕೃಷಿ ಇಲಾಖೆ ಸುಳ್ಯ, ರೈತ ಉತ್ಪಾದಕ ಕಂಪನಿ ಸಹಯೋಗದೊಂದಿಗೆ ಹಡಿಲು ಗದ್ದೆ ಬೇಸಾಯ ಕಾರ್ಯಕ್ರಮ ಕಳಂಜ ಗ್ರಾಮದ ಮಣಿಮಜಲಿನಲ್ಲಿ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ, ಈ ಹಿಂದೆ ಎಲ್ಲೆಡೆ ಗದ್ದೆ ಬೇಸಾಯ ಹಾಗೂ ಭತ್ತದ ನಾಟಿಗಳು ನಡೆಯುತ್ತಿದ್ದವು. ಆದರೆ ಇದೀಗ ಈ ರೀತಿಯ ಕಾರ್ಯಕ್ರಮಗಳ ಮೂಲಕ ಭತ್ತ ಬೇಸಾಯ ಮಾಡಬೇಕಾಗಿದೆ. ಹಡಿಲು ಬಿದ್ದ ಗದ್ದೆಗಳನ್ನು ಬೇಸಾಯ ಮಾಡುವ ಮೂಲಕ ಎಲ್ಲರೂ ಭತ್ತ ನಾಟಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಲಾಖೆ ಇದಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ರೈತ ಉತ್ಪಾದಕ ಕಂಪನಿ ಅಧ್ಯಕ್ಷ ವೀರಪ್ಪ ಗೌಡ ಕಣ್ಣಲ್ ಅಧ್ಯಕ್ಷತೆ ವಹಿಸಿದ್ದರು. ಕಳಂಜ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗುರುಪ್ರಸಾದ್, ಸುಳ್ಯ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಕುಸುಮಾಧರ ಎ.ಟಿ., ರೈತ ಉತ್ಪಾದಕ ಕಂಪನಿ ನಿರ್ದೇಶಕಿ ಮಧುರಾ ಎಂ.ಆರ್. ಮುಖ್ಯ ಅತಿಥಿಗಳಾಗಿದ್ದರು.
ಪ್ರಮುಖರಾದ ಶ್ರೀನಾಥ್ ರೈ ಬಾಳಿಲ, ಭಾಸ್ಕರನ್ ನಾಯರ್, ಗೋವಿಂದ ಅಳವುಪಾದೆ, ಜಯಕುಮಾರ್ ಮಡಪ್ಪಾಡಿ, ಅಜಿತ್ ರಾವ್ ಕಿಲಂಗೋಡಿ ಮತ್ತಿತರರು ಉಪಸ್ಥಿತರಿದ್ದರು.
ಹಡಿಲು ಬಿದ್ದ ಗದ್ದೆಯಲ್ಲಿ ಯಾಂತ್ರಿಕೃತ ನಾಟಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ಟ್ರ್ಯಾಕ್ಟರ್‌ನಲ್ಲಿ ತೆರಳಿ ವೀಕ್ಷಿಸಿದರು. ಸಹ್ಯಾದಿ ಬ್ರಹ್ಮ ತಳಿಯನ್ನು 1.23 ಎಕರೆಯಲ್ಲಿ ನಾಟಿ ಮಾಡಲಾಗಿದೆ. ಈ ಬಾರಿ ಸುಳ್ಯದಲ್ಲಿ 10 ಎಕರೆಗಳಲ್ಲಿ ಭತ್ತನಾಟಿ ಮಾಡಲು ಯೋಜನೆ ಹಾಕಲಾಗಿದ್ದು, ಈಗಾಗಲೇ 6 ಎಕರೆ ಹಡಿಲು ಭೂಮಿಯಲ್ಲಿ ಬೇಸಾಯ ಮಾಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗುರುಪ್ರಸಾದ್ ತಿಳಿಸಿದ್ದಾರೆ.