

ಕಾಸರಗೋಡು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 2025 ಮಾರ್ಚ್ 27ರಿಂದ ಏಪ್ರಿಲ್ 7ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಹಾಗೂ ಮೂಡಪ್ಪ ಸೇವೆಗೆ ಅಗತ್ಯವಿರುವ ಅಕ್ಕಿ ಸಂಗ್ರಹಕ್ಕೆ, ಏರಿಕ್ಕಳ ವಯನಾಡು ಕುಲವನ್, ರಕ್ತೇಶ್ವರಿ ನಾಗಬನದ ಮುಂಭಾಗದಲ್ಲಿರುವ ಬಯಲಿನಲ್ಲಿ ಭತ್ತ ಸಸಿ ನಾಟಿಗೆ ಚಾಲನೆ ನೀಡಲಾಯಿತು.
ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ನೇಜಿ ನೀಡುವ ಮೂಲಕ ಚಾಲನೆ ನೀಡಿದರು. ಮೊದಲು ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಮಾಣಿಲ ಶ್ರೀ ಉಪಸ್ಥಿತಿಯಲ್ಲಿ, ಶ್ರೀ ಕ್ಷೇತ್ರದ ಅರ್ಚಕ ವೇಣುಗೋಪಾಲ ಕಲ್ಲೂರಾಯ ಪ್ರಾರ್ಥನೆ ನೆರವೇರಿಸಿದರು. ನವೀಕರಣ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. ಭಕ್ತರು ನೇಜಿ ಕಿತ್ತು ಹದಬರಿಸಿದ ಗದ್ದೆಯಲ್ಲಿ ನಾಟಿ ಮಾಡಿದರು. ಆ.18ರಂದು ಏರಿಕ್ಕಳದ ಭತ್ತದ ಬಯಲಿನಲ್ಲಿ ಭತ್ತದ ಬೀಜ ಬಿತ್ತನೆ ನಡೆಸಲಾಗಿತ್ತು.