ವಿದ್ಯಾರ್ಥಿಗಳಲ್ಲಿ ಭತ್ತ ನಾಟಿ ಸಂಭ್ರಮ

MDG paddy
ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಶಾಲೆ ಮಕ್ಕಳು ಹಳೇಕೋಟೆ ಗ್ರಾಮದ ಗದ್ದೆಯಲ್ಲಿ ಸಸಿ ನಾಟಿ ಮಾಡಿದರು. ಶಿಕ್ಷಕಿ ಸಿ.ಎ.ಲಲಿತಾ, ಅಕ್ಷತಾ, ಕೆ.ಶಾವರ್, ಕುಸುಮಾವತಿ, ಭಾಗ್ಯಾ ಇತರರಿದ್ದರು.
Published on

ಮೂಡಿಗೆರೆ: ಶಾಲಾ ಪಠ್ಯ ಚಟುವಟಿಕೆ ಭಾಗವಾಗಿ ಬಿದರಹಳ್ಳಿ ಶಾಲೆ ವಿದ್ಯಾರ್ಥಿಗಳನ್ನು ಮಂಗಳವಾರ ಶಿಕ್ಷಕರು ಹಳೇಕೋಟೆ ಗ್ರಾಮದ ವೀರಪ್ಪ ಎಂಬುವವರ ಗದ್ದೆಗೆ ಕರೆದೊಯ್ದು ನಾಟಿ ಮಾಡಿಸಿದಾಗ ಮಕ್ಕಳು ಸಂಭ್ರಮಿಸಿದರು. ಉತ್ಸಾಹದಿಂದ ವಿದ್ಯಾರ್ಥಿಗಳು ನಾಟಿ ಮಾಡಿದರು. ಪಾಲಕರು, ಶಿಕ್ಷಕರು ಅಕ್ಕಪಕ್ಕದ ಗದ್ದೆಯ ಕಾರ್ಮಿಕರೂ ಮಕ್ಕಳಿಗೆ ಸಾಥ್ ನೀಡಿದರು.

ವಿದ್ಯಾರ್ಥಿಗಳು ಭತ್ತದ ಸಸಿ ಹೊತ್ತು ತಂದು ಗದ್ದೆಯಲ್ಲಿ ನಾಟಿ ಮಾಡಿ ಅನುಭವ ಪಡೆದರು. ಕಾರ್ಮಿಕರು, ಶಿಕ್ಷಕರು ಭತ್ತ ಬೆಳೆಯುವ ವಿಧಾನ ವಿವರಿಸಿದರು.
ಶಿಕ್ಷಕಿ ಸಿ.ಎ.ಲಲಿತಾ ಮಾತನಾಡಿ, ಅನುಭವದ ಶಿಕ್ಷಣವನ್ನು ಎಂದಿಗೂ ಮರೆಯಲಾಗದು. ಪುಸ್ತಕದಲ್ಲಿರುವ ಅಕ್ಷರಗಳನ್ನು ಮಕ್ಕಳಿಗೆ ಕಲಿಸಿಕೊಟ್ಟರೆ ಸಾಲದು. ಅದರ ಅನುಭವವಾಗಬೇಕು. ಹಾಗಾದರೆ ಮಾತ್ರ ವಿದ್ಯಾರ್ಥಿಗಳು ಪಠ್ಯವನ್ನು ಸಮರ್ಪಕವಾಗಿ ಅಭ್ಯಾಸ ಮಾಡುವ ಜತೆಗೆ ಅದರಲ್ಲಿರುವ ವಿಷಯಗಳನ್ನು ಆಳವಾಗಿ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿ ಸುಮಿತ್ ಮಾತನಾಡಿ, ಅಪ್ಪ, ಅಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಾರೆ. ಅವರ ಕಷ್ಟ ನನಗೆ ಈಗ ಅರಿವಾಗಿದೆ. ಇದೊಂದು ಹೊಸ ಅನುಭವ. ಇಂಥ ಪಠ್ಯ ಚಟುವಟಿಕೆಗಳಿಂದ ಇನ್ನಷ್ಟು ಕಲಿಯಬಹುದು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಎಚ್.ಟಿ.ವೀರಪ್ಪ ಅವರು ನಾಟಿ ವೇಳೆ ಗದ್ದೆಯನ್ನು ಹದ ಮಾಡುವ ವಿಧಾನ, ಸಸಿ ನಾಟಿ, ಕಳೆ ಕೀಳುವ ಮತ್ತು ಗೊಬ್ಬರ ಹಾಕಿ, ರಾಸಾಯನಿಕ ಬಳಸಿ ರೋಗ ಬಾಧೆ ಮತ್ತು ಕೀಟ ಬಾಧೆಯಿಂದ ಬೆಳೆಯನ್ನು ರಕ್ಷಿಸುವ ವಿಧಾನ, ಬೆಳೆಯ ಅವಧಿ, ಕಟಾವಿನ ಮಾಹಿತಿ ನೀಡಿದರು.
ಎಸ್‌ಡಿಎಂಸಿ ಉಪಾಧ್ಯಕ್ಷೆ ಅಕ್ಷತಾ, ಸದಸ್ಯೆ ಸುಮಾ, ಮುಖ್ಯಶಿಕ್ಷಕಿ ಕೆ.ಶಾವರ್, ಶಿಕ್ಷಕರಾದ ಅಲೀಸ್ ಡೇಸಾ, ಕುಸುಮಾವತಿ, ಭಾಗ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net