110 ಎಕರೆ ಭೂಮಿಯಲ್ಲಿ ನಾಟಿ: ಭತ್ತ ಬೆಳೆಯೋಣ ಗದ್ದೆಗಿಳಿಯೋಣ ಅಭಿಯಾನ ಯಶಸ್ವಿ

Paddy harvesting
Published on

ಶ್ರವಣ್‌ಕುಮಾರ್ ನಾಳ ಪುತ್ತೂರು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಮುಂದಾಳತ್ವದಲ್ಲಿ ಆರಂಭಿಸಲಾದ ಹಡಿಲು ಗದ್ದೆ ಬೇಸಾಯ ಯೋಜನೆ -ಭತ್ತ ಬೆಳೆಯೋಣ.. ಗದ್ದೆಗಿಳಿಯೋಣ ಅಭಿಯಾನ ಯಶಸ್ಸು ಸಾಧಿಸಿದ್ದು, ತಾಲೂಕಿನ 110 ಎಕರೆ ಹಡಿಲು ಗದ್ದೆಯಲ್ಲಿ ನಾಟಿ ಮಾಡಲಾಗಿದೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹಡಿಲು ಗದ್ದೆ ಬೇಸಾಯ ಕ್ರಾಂತಿಗೆ ಕರೆ ನೀಡಿದ್ದರು. ಜಿಲ್ಲೆಯಲ್ಲಿ ಮತ್ತೆ ಭತ್ತದ ಕೃಷಿ ವೈಭವ ಮರುಕಳಿಸಬೇಕು, ಜಿಲ್ಲೆಗೆ ಬೇಕಾದ ಕುಚ್ಚಲಕ್ಕಿಯನ್ನು ಇಲ್ಲಿಯೇ ಬೆಳೆಯುವ ಪರಿಪಾಠ ಆರಂಭಗಬೇಕು ಎಂಬ ಆಶಯವಿಟ್ಟು ತಾಲೂಕು ಆಡಳಿತ ಮತ್ತು ದೇವಸ್ಥಾನಗಳಿಗೆ ಸೂಚಿಸಿದ್ದರು. ಅದರಂತೆ ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೇತೃತ್ವ ವಹಿಸಿ ದೇವಸ್ಥಾನಗಳ ಸಭೆ ಆಯೋಜಿಸಿತ್ತು. ಉಪ್ಪಿನಂಗಡಿ ಭಾಗದ ನೇತೃತ್ವವನ್ನು ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಒಪ್ಪಿಸಲಾಗಿತ್ತು.

ಹಡಿಲು ಗದ್ದೆಗಳಲ್ಲಿ ಬೇಸಾಯ: ಪುತ್ತೂರು ದೇವಾಲಯ ಸೇರಿದಂತೆ ಅನೇಕ ದೇವಸ್ಥಾನಗಳು ಸ್ಥಳೀಯ ಸಮಿತಿ ರಚಿಸಿ ಆಯಾ ಭಾಗದ ಹಡಿಲು ಗದ್ದೆಗಳಲ್ಲಿ ಬೇಸಾಯ ಕೈಗೊಂಡಿವೆ. ಖಾಸಗಿಯವರ ಹಡಿಲು ಗದ್ದೆಗಳನ್ನು ಕೂಡ ಅವರ ಒಪ್ಪಿಗೆ ಪಡೆದು ಸ್ಥಳೀಯ ದೇವಸ್ಥಾನದ ವತಿಯಿಂದ ನಾಟಿ ಮಾಡಲಾಗಿದೆ. ಬಿತ್ತನೆ ಬೀಜಗಳನ್ನು ಪುತ್ತೂರು ದೇವಾಲಯ ಮತ್ತು ಶಾಸಕ ಸಂಜೀವ ಮಠಂದೂರು ಮೂಲಕ ವಿತರಿಸಲಾಗಿತ್ತು. ಕೆಲವೆಡೆ ನೇರ ಬಿತ್ತನೆ ಮಾಡಲಾಗಿದ್ದರೆ, ಹಲವೆಡೆ ಸಸಿಮಡಿ ತಯಾರಿಸಿ ಯಾಂತ್ರಿಕ ನಾಟಿ ಮಾಡಲಾಗಿದೆ.

ನಾಟಿ ಕಾರ್ಯ ಪೂರ್ಣ: ಕೊನೆಯ ಹಂತದಲ್ಲಿ ಕಾವು ಸಮೀಪ ನನ್ಯ ಅಚ್ಯುತ ಮೂಡಿತ್ತಾಯರ 2 ಎಕರೆ ಗದ್ದೆಯಲ್ಲಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವತಿಯಿಂದ ನಾಟಿ ಮಾಡಲಾಯಿತು. ಆ.9ರಂದು ಬೆಳಗ್ಗೆ ಬಲ್ನಾಡ್ ಗ್ರಾಮದ ಉಜಿರ್‌ಪಾದೆಯಲ್ಲಿ ಖಾಸಗಿಯವರ 2 ಎಕರೆ ಗದ್ದೆಯಲ್ಲಿ ಪುತ್ತೂರು ದೇಗುಲ ವತಿಯಿಂದ ನಾಟಿ ಮಾಡಲಾಯಿತು. ಸಂಜೆ ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣು ದೇವಸ್ಥಾನದ ವತಿಯಿಂದ 2 ಎಕರೆ ಗದ್ದೆಗೆ ನಾಟಿ ಮಾಡಲಾಯಿತು. ಈ ಮೂಲಕ ಏಣೇಲ್ ಹಂಗಾಮಿನ ನಾಟಿ ಮುಕ್ತಾಯಗೊಂಡಿದೆ.

ಕೃಷಿಯಂತ್ರ ಬಳಕೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಸ್ತುವಾರಿಯಲ್ಲಿ ನಡೆಯುತ್ತಿರುವ ಕೃಷಿಯಂತ್ರ ಧಾರೆ ಯಂತ್ರಗಳು ಹಡಿಲು ಭೂಮಿಯಲ್ಲಿ ಕೃಷಿ ಕ್ರಾಂತಿಗೆ ಅಮೋಘ ಕೊಡುಗೆ ನೀಡಿವೆ. ಯೋಜನೆಯಲ್ಲಿ ಖಾಸಗಿಯವರು ತಮ್ಮ ಗದ್ದೆಗಳನ್ನು ಊರಿನ ದೇವಳಕ್ಕಾಗಿ ಬಿಟ್ಟುಕೊಟ್ಟಿದ್ದು, ಅದರ ಬೆಳೆ ಆಯಾ ದೇವಳದ ಭಂಡಾರ ಸೇರಲಿದೆ. ಬೇಸಾಯಕ್ಕೆ ಬೇಕಾದ ಆರ್ಥಿಕ ಶಕ್ತಿಯನ್ನು ಸ್ಥಳೀಯ ದಾನಿಗಳಿಂದ ಕ್ರೋಡೀಕರಿಸಲಾಗಿದೆ.

ನಮ್ಮ ನಿರೀಕ್ಷೆಗೂ ಮೀರಿ ಅಭಿಯಾನ ಯಶಸ್ವಿಯಾಗಿದೆ. ನಾಟಿ ಮೂಲಕ ಶೇ.30 ಕೆಲಸ ಮಾತ್ರ ಮುಗಿದಿದೆ. ಇನ್ನು ಗದ್ದೆಯ ನಿರ್ವಹಣೆ, ರಸಗೊಬ್ಬರ ನೀಡುವಿಕೆ, ಕ್ರಿಮಿಕೀಟ ನಿಯಂತ್ರಣ, ಕೊಯ್ಲು ಇತ್ಯಾದಿ ಕೆಲಸವಿದೆ. ನಮ್ಮ ದೇವಸ್ಥಾನದ ನೇತೃತ್ವವಿದ್ದರೂ, ಸ್ಥಳೀಯ ದೇವಳಗಳು ಹೆಚ್ಚಿನ ಮುತುವರ್ಜಿ ವಹಿಸಿದ ಕಾರಣ ಅಭಿಯಾನ ಯಶಸ್ವಿಯಾಗಿವೆ. ಅಲ್ಲಲ್ಲಿ ಬೆಳೆದ ಭತ್ತ ಆಯಾ ದೇವಳಕ್ಕೆ ಸೇರಲಿದೆ.

-ಕೇಶವ ಪ್ರಸಾದ್ ಮುಳಿಯ, ಅಧ್ಯಕ್ಷರು,

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net