ಭತ್ತ ಕಟಾವು ವೇಳೆ ದರ ಕುಸಿತ, ಕಂಗಾಲಾದ ರೈತರು

Kampli A pile of paddy left to dry in APMC premises
ಕಂಪ್ಲಿಯ ಎಪಿಎಂಸಿ ಆವರಣದಲ್ಲಿ ಒಣಗಲು ಹಾಕಿದ ಭತ್ತದ ರಾಶಿ.
Published on

ಕಂಪ್ಲಿ: ಮಳೆ ನಿಂತ ಮೇಲೆ ಭತ್ತ ಕೊಯ್ಲು ಭರಾಟೆಯಿಂದ ಸಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಭತ್ತ, ಅಕ್ಕಿಯ ದರ ಕುಸಿತ ಕಂಡಿದೆ. ಇದರಿಂದ ರೈತರು ಹತಾಶೆಗೊಂಡಿದ್ದಾರೆ. ಅಕ್ಕಿ ಮಾರಾಟವೂ ಮಂದವಾಗಿದೆ.

ಆರ್‌ಎನ್‌ಆರ್ ಭತ್ತ ಆರಂಭದಲ್ಲಿ 75 ಕೆಜಿಗೆ 1920 ರೂ. ಇತ್ತು. ಇದೀಗ 1800 ರೂ.ಗೆ ಕುಸಿದಿದೆ. 1638 ತಳಿಯ ಭತ್ತ 1800 ರೂ.ಯಿಂದ 1,490ರೂ., ಗಿಡ್ಡ ಆರ್‌ಎನ್‌ಆರ್ ಭತ್ತ 1800 ರೂ.ಯಿಂದ 1,600 ರೂ., ನೆಲ್ಲೂರು ಸೋನಾ 1720 ರೂ. ಯಿಂದ 1500 ರೂ.ಗೆ ಕುಸಿತಗೊಂಡಿದೆ. ಆರ್‌ಎನ್‌ಆರ್ ಅಕ್ಕಿ ಕೆಜಿಗೆ 47 ರೂ.ಯಿಂದ 45 ರೂ.ಗೆ, ನೆಲ್ಲೂರು ಸೋನಾ ಅಕ್ಕಿ ಕೆಜಿಗೆ 44 ರೂ.ಯಿಂದ 38 ರೂ.ಗೆ ಕುಸಿತಗೊಂಡಿದೆ.

ಕಳೆದ ವರ್ಷ ರಫ್ತಿಗೆ ಅವಕಾಶ ಕೊಟ್ಟಿದ್ದರಿಂದ ಸುಗ್ಗಿಯ ಭತ್ತಕ್ಕೆ 2500 ರೂ. ದರ ಇತ್ತು. ಕಳೆದ ವರ್ಷ ಸುಗ್ಗಿ ಭತ್ತ, ಅಕ್ಕಿ ಇನ್ನು ಇರುವಾಗಲೇ ಮಾರುಕಟ್ಟೆಗೆ ಇದೀಗ ಸಾಕಷ್ಟು ಪ್ರಮಾಣದ ಭತ್ತ ಬರುತ್ತಿರುವುದರಿಂದ ಬೇಡಿಕೆಯೊಂದಿಗೆ ದರವೂ ಕುಸಿತಗೊಂಡಿದೆ. ಗೌರಿ ಹುಣ್ಣಿಮೆ ನಂತರ ಭತ್ತದ ದರ ಒಂದು ಹಂತಕ್ಕೆ ಬಂದು ನಿಲ್ಲಲಿದ್ದು ಅಲ್ಲಿಯತನಕ ದರ ಕುಸಿತವಾಗುವ ಸಾಧ್ಯತೆಗಳೇ ಹೆಚ್ಚಿವೆ. ಆದ್ದರಿಂದ ಸರ್ಕಾರ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ರೈತರು ರಸಗೊಬ್ಬರ, ಕ್ರಿಮಿನಾಶಕ, ಕೂಲಿಗಾಗಿ ಸಾಲ ಮಾಡಿಕೊಂಡಿದ್ದರಿಂದ ಸಿಕ್ಕ ಬೆಲೆಗೆ ಭತ್ತ ಮಾರಿ ನಷ್ಟಹೊಂದುತ್ತಿದ್ದಾರೆ. ಸರ್ಕಾರ ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಿ ರೈತರಿಂದ ಖರೀದಿಸಬೇಕು. ಕೇಂದ್ರ ತೆರೆಯದಿದ್ದರೆ ಹೋರಾಟ ನಡೆಸಲಾಗುವುದು. | ತಿಮ್ಮಪ್ಪ ನಾಯಕ, ರೈತ ಸಂಘದ ನಗರ ಅಧ್ಯಕ್ಷ, ಕಂಪ್ಲಿ. ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ. | ಎಸ್.ಶಿವರಾಜ, ತಹಸೀಲ್ದಾರ್, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net