

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಕಡಿಮೆ ಇಳುವರಿ, ಮಳೆಯ ಕೊರತೆ, ಸರ್ಕಾರದ ಬೆಂಬಲ ಕೊರತೆ ಸಹಿತ ಹಲವು ಕಾರಣಗಳಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದು, ಭತ್ತದ ಬೇಸಾಯ ಕೂಡ ಗಣನೀಯ ಮಟ್ಟದಲ್ಲಿ ಕಡಿಮೆಯಾಗುತ್ತಿದೆ. ಪ್ರಸಕ್ತ ವರ್ಷ ನಿರಂತರ ಮಳೆಯ ಕಾರಣದಿಂದ ಭತ್ತ ಬೆಳೆಯುವ ರೈತನಿಗೆ ಅಗ್ನಿಪರೀಕ್ಷೆ ಎದುರಾಗಿದೆ.
ಜೂನ್‌ನಲ್ಲೇ ಬೇಸಾಯ ಆರಂಭಿಸಿದ ರೈತರ ಗದ್ದೆಯಲ್ಲಿ ಭತ್ತಕ್ಕಿಂತ ನೀರೇ ಅಧಿಕ ತುಂಬಿದ್ದು, ಈಗಾಗಲೇ ನೇಜಿ ಮಾಡಿದವರು ಮತ್ತು ಬಿತ್ತನೆ ಮಾಡಿದವರಿಗೆ ನಿಜವಾದ ಸವಾಲು ಎದುರಾಗಿದೆ.
ಕಳೆದ ವಾರ ಮಳೆ ಕಡಿಮೆಯಾಗಿ ಬಿಸಿಲು ಕಾಣಿಸಿಕೊಂಡಿದ್ದರೂ ಪ್ರಸ್ತುತ ಮೂರ್ನಾಲ್ಕು ದಿನಗಳಿಂದ ಮತ್ತೊಮ್ಮೆ ಮಳೆಯಾಗುತ್ತಿದೆ. ತೆನೆಯಲ್ಲಿ ನೀರು ನಿತ್ಯವೂ ನಿಂತರೆ ಭತ್ತದ ತೆನೆಗಳು ಹೊಟ್ಟಾಗುವ ಭೀತಿ ಇದ್ದು, ಇಳುವರಿ ಕಡಿಮೆಯಾಗಲಿದೆ. ಕೆಲವು ಕಡೆಗಳಲ್ಲಿ ಭತ್ತದ ಪೈರು ಬೆಳೆದು ನಿಂತಿದ್ದು, ಮಳೆ ಪ್ರಮಾಣ ಹೆಚ್ಚಾದರೆ ಭತ್ತದ ಪೈರು ನೆಲಕಚ್ಚುವ ಸಾಧ್ಯತೆ ಇದೆ. ಅತಿವೃಷ್ಟಿ, ನವಿಲು, ಹಕ್ಕಿಗಳ ಕಾಟ ಸೇರಿದಂತೆ ಅನೇಕ ಸವಾಲುಗಳನ್ನು ಮೆಟ್ಟಿನಿಂತಿದ್ದರಿಂದ ತಕ್ಕಮಟ್ಟಿನ ಬೆಳೆ ಕೈಗೆ ಸಿಗಬಹುದು ಎಂದು ಹುಮ್ಮಸ್ಸು ಮೂಡುತ್ತಿರುವ ವೇಳೆಯೇ ಈ ಅಕಾಲಿಕ ಮಳೆ ರೈತರ ಪಾಲಿಗೆ ಶಾಪವಾಗುತ್ತಿದೆ.
ಭತ್ತದ ಬೇಸಾಯ ಸುಮಾರು 110ರಿಂದ 120 ದಿನಗಳ ಪ್ರಕ್ರಿಯೆ. ಇದರಲ್ಲಿ 90 ದಿನಗಳವರೆಗೂ ಮಳೆಯಿಂದ ಸಮಸ್ಯೆಯಾಗುದಿಲ್ಲ. ಕೊನೆಯ 30 ದಿನಗಳು ಅತ್ಯಂತ ನಿರ್ಣಾಯಕವಾಗಿದ್ದು, ಈ ವೇಳೆ ಪೈರಿನಲ್ಲಿ ತೆನೆ ಕಟ್ಟಿಕೊಳ್ಳುತ್ತದೆ. ಬಳಿಕ ಮುಂದಿನ ದಿನಗಳಲ್ಲಿ ತೆನೆ ಹೊರಬಂದು ಬಾಗತೊಡಗುತ್ತದೆ. ಆಗ ಪೈರಿನಲ್ಲಿ ಭತ್ತ ಬೆಳೆಯುತ್ತದೆ. ಪೈರಿನೊಳಗೆ ಭತ್ತ ತುಂಬಿಕೊಳ್ಳುವ ಅವಧಿಯಲ್ಲಿ ನಿರಂತರ ಮಳೆಯಾದರೆ ನೀರು ತೆನೆಯ ಗರ್ಭದಲ್ಲಿ ಸಂಗ್ರಹಗೊಳ್ಳುತ್ತದೆ. ಇದು ತೆನೆಯ ಬೆಳವಣಿಗೆಗೆ ಮಾರಕ. ನಿರಂತರ ಮಳೆಯಿಂದ ತೆನೆ ಬೆಳೆಯುವ ಬದಲು ಕೊಳೆಯುವ ಸಾಧ್ಯತೆಗಳಿದ್ದು, ಇದು ಗದ್ದೆಗೆ ಬಿದ್ದು ಹಾಳಾಗುವ ಆತಂಕ ರೈತರನ್ನು ಕಾಡಲಾರಂಭಿಸಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಭತ್ತದ ಕೃಷಿಗೆ ಶಾಪವಾಗುವಾಗುತ್ತಿದೆ. ಅತಿವೃಷ್ಟಿಯಿಂದ ಕಂಗೆಟ್ಟಿದ್ದ ರೈತರು, ಬಳಿಕ ಉತ್ತಮ ಬೆಳೆ ಬರಬಹುದು ಎಂಬ ಆಶಾವಾದ ಹೊಂದಿದ್ದರು. ಆದರೆ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಬೆಳೆಯನ್ನು ನಾಶ ಮಾಡುವ ಭೀತಿ ಸೃಷ್ಟಿಸಿದೆ-ವಿಜಯ ಪೂಜಾರಿ ಕೃಷಿಕ