ರೈತರಿಗೆ ಗೊಂದಲದ ಬಲೆಯಾದ ಬೆಂಬಲ ಬೆಲೆ: ಭತ್ತ ಬೆಳೆಯುವ ಪ್ರದೇಶ ಕುಂಠಿತದ ಬೆನ್ನಲ್ಲೇ ಹವಾಮಾನ ವೈಪರೀತ್ಯದ ಸವಾಲು

Paddy
Published on

ಬೆಂಗಳೂರು: ದೇಶದ ಮೂರನೇ ಎರಡು ಜನಸಂಖ್ಯೆಯ ಪ್ರಮುಖ ಆಹಾರವಾದ ಅಕ್ಕಿ ಬೆಳೆಯುವ ರೈತನಿಗೆ ಒಂದೆಡೆ ಸರ್ಕಾರಗಳು ಘೋಷಿಸುವ ‘ಬೆಂಬಲ ಬೆಲೆ’ ಗೊಂದಲದ ಬಲೆಯಾಗಿ ಕಾಡುತ್ತಿದ್ದರೆ, ಮತ್ತೊಂದೆಡೆ ಜಾಗತಿಕ ತಾಪಮಾನ ಏರಿಕೆಯ ಬಿಸಿ ಶಾಪವಾಗಿ ಪರಿಣಮಿಸಲಾರಂಭಿಸಿದೆ. ಸರ್ಕಾರ ನಿಗದಿಪಡಿಸುವ ಕನಿಷ್ಠ ಬೆಂಬಲ ಬೆಲೆಯ (ಎಂಎಸ್​ಪಿ) ಅನುಷ್ಠಾನ ಕೂಡ ಸಂಪೂರ್ಣ ಅವೈಜ್ಞಾನಿಕವಾಗಿದೆ. ಬಹುತೇಕ ಉತ್ತರ ಭಾರತದ ಅಕ್ಕಿ ತಳಿಗಳನ್ನು ಆಧಾರವಾಗಿಟ್ಟುಕೊಂಡು ರೂಪಿತ ವಾಗುವ ಮಾನದಂಡ ಅನುಸರಿಸಿ ಎಂಎಸ್​ಪಿ ಪಡೆಯುವುದಕ್ಕಿಂತ ನೂರಿನ್ನೂರು ರೂ. ಕಡಿಮೆ ದುಡ್ಡಿಗೇ ರೈತರು ಬೆಳೆಗಳನ್ನು ಮಧ್ಯವರ್ತಿಗಳಿಗೆ ಮಾರಿಕೊಳ್ಳುತ್ತಿದ್ದಾರೆ. ರೈತರ ಬೆಂಬಲಕ್ಕೆಂದು ರೂಪಿತವಾದ ಎಪಿಎಂಸಿ ವ್ಯವಸ್ಥೆ ಮೇಲೆ ಬಹುತೇಕ ಭತ್ತದ ರೈತರಿಗೆ ವಿಶ್ವಾಸವಿಲ್ಲ. ಹೀಗಾಗಿ ಎಂಎಸ್​ಪಿ ಬದಲಿಗೆ ಶಾಸನಾತ್ಮಕ ಕನಿಷ್ಠ ದರ (ಎಸ್​ಎಂಪಿ) ನೀಡಿದರೆ ಸ್ವಲ್ಪ ನಿರಾಳವಾಗುವ ಅಂದಾಜಿದೆ.

ಹವಾಮಾನ ಸವಾಲು: ಮಾರುಕಟ್ಟೆ ದರದ ಏರುಪೇರಿನ ಜತೆಯಲ್ಲೇ ಜಾಗತಿಕ ತಾಪಮಾನ ರೈತರನ್ನು ಹೈರಾಣಾಗಿಸಿದೆ.

ಜುಲೈನಲ್ಲಿ ಭತ್ತದ ಬಿತ್ತನೆ ಆಗುವುದು ವಾಡಿಕೆ. ಆದರೆ ಮುಂಗಾರು ಆಗಮನ ವ್ಯತ್ಯಯದಿಂದಾಗಿ ತಡವಾಗಿ ಮಳೆ ಬರುತ್ತಿರುವುದರಿಂದ ಜಲಾಶಯದ ನೀರು ಲಭಿಸುವುದೂ ವಿಳಂಬವಾಗುತ್ತಿದೆ. ಹೀಗಾಗಿ ಬಿತ್ತನೆ ಜುಲೈ ಬದಲಿಗೆ ಸೆಪ್ಟೆಂಬರ್​ವರೆಗೆ ಹೋಗಿದೆ. ಈ ಸಮಯದಲ್ಲಿ ಬಿತ್ತನೆ ಆದರೆ ಚಳಿಗಾಲದಲ್ಲಿ ಹೂ ಬಿಡುತ್ತದೆ. ಇಳುವರಿಯಲ್ಲಿ ಭಾರೀ ಕಡಿತವಾಗುತ್ತಿದೆ ಎಂದು ಟಿ. ನರಸೀಪುರದ ರೈತ ಎಚ್.ಕೆ. ಮಹದೇವಯ್ಯ ತಿಳಿಸುತ್ತಾರೆ.

ನಾಲಾ ಪ್ರದೇಶದಲ್ಲಿ ಭತ್ತ ಬಿಟ್ಟರೆ ಬೇರೆಡೆ ಹೊರಳಲು ಸಾಧ್ಯವಿಲ್ಲದ ಕಾರಣಕ್ಕೆ ಹಾಗೂ ಅದೊಂದೇ ಬೆಳೆ ಬೆಳೆದು ಅಭ್ಯಾಸವಾಗಿರುವುದರಿಂದ ರತರು ಇನ್ನೂ ಭತ್ತ ಬೆಳೆಯುತ್ತಿದ್ದಾರೆಯೇ ಹೊರತು ಸಂಕಟಗಳೇ ಹೆಚ್ಚು ಕಾಣಿಸುತ್ತಿವೆ ಎನ್ನುವುದು ರಾಯಚೂರಿನ ರೈತ ಅಮರೇಶ್ ಸಜ್ಜನ್ ಅಭಿಪ್ರಾಯ.

ನಿಗದಿಯಾಗುವ ಬೆಂಬಲ ಬೆಲೆಯೇ ಕಡಿಮೆ. ಅದನ್ನು ಪಡೆಯುವ ಹರಸಾಹಸಕ್ಕಿಂತ ದಲ್ಲಾಳಿಗಳೇ ವಾಸಿ ಎಂದು ರೈತರು ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಾರೆ. ಎಪಿಎಂಸಿಯ ಅಸಮರ್ಪಕ ದರಕ್ಕೆ ಅನುಗುಣವಾಗಿ ದಲ್ಲಾಳಿಗಳು ಹಣ ನೀಡುತ್ತಾರೆ. ಕೂಲಿ, ಉತ್ಪಾದನಾ ವೆಚ್ಚ ಹೆಚ್ಚಾಗಿರುವಾಗ ದರ ಮಾತ್ರ ಕುಸಿಯುತ್ತಿದೆ. -ನಾಗರೆಡ್ಡಿ, ರಾಯಚೂರು ರೈತ ಬೆಳೆಯಲು ಸಮಸ್ಯೆಯಿಲ್ಲ, ಮಾರುಕಟ್ಟೆಯೇ ಆತಂಕ. ನಮ್ಮಲ್ಲಿ ಬೆಳೆಯುವ ಬಹುಪ್ರಮಾಣದ ಭತ್ತ ತಮಿಳುನಾಡಿಗೆ ಮಾರಾಟವಾಗುತ್ತದೆ. ನಮ್ಮ ರೈತರು ಬೆಂಬಲ ಬೆಲೆಯ ಗೋಜಿಗೇ ಹೋಗದೆ ಸಿಕ್ಕಷ್ಟು ಬೆಲೆಗೆ ಇವರಿಗೇ ಮಾರಾಟ ಮಾಡುತ್ತಾರೆ. -ಟಿ.ಸಿ. ಮಹದೇವಪ್ಪ, ಕಬಿನಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಆಹಾರದ ಹಕ್ಕು, ಉದ್ಯೋಗದ ಹಕ್ಕುಗಳಿರುವಾಗ ರೈತರಿಗೆ ಕನಿಷ್ಠ ಬೆಲೆಯ ಹಕ್ಕು ನೀಡುವ ಎಸ್​ಎಂಪಿ ರೂಪಿಸುವ ಅಗತ್ಯವಿದೆ. ಖರೀದಿ ಕೇಂದ್ರಗಳ ಆರಂಭಕ್ಕೆ ಪ್ರತಿ ಬಾರಿ ರ್ಚಚಿ ನಡೆಸಿ ತೀರ್ವನಿಸುವ ಬದಲಿಗೆ, ಸ್ವಯಂಚಾಲಿತವಾಗಿ ಕ್ಯಾಲೆಂಡರ್ ಆಫ್ ಇವೆಂಟ್ಸ್ ಮೂಲಕ ನಡೆಸಿದರೆ ಅನುಕೂಲ. | ಹನುಮನಗೌಡ ಬೆಳಗುರ್ಕಿ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ

ಏನಾದರೆ ಉಪಯೋಗ?

ಕನಿಷ್ಠ ಬೆಂಬಲ ಬೆಲೆ ಎಂಬುದು ಹೆಸರಿಗಷ್ಟೇ ಸೀಮಿತ, ಅದಕ್ಕೆ ಶಾಸನಾತ್ಮಕ ರೂಪ ಕೊಟ್ಟರಷ್ಟೇ ರೈತರಿಗೆ ಉಪಯೋಗ ಎಂಬ ಅಭಿಪ್ರಾಯವಿದೆ. ಎಂಎಸ್​ಪಿ ಬದಲಿಗೆ ಎಸ್​ಎಂಪಿ ಅನುಷ್ಠಾನ ಮಾಡಬೇಕು. ಈ ದರಕ್ಕಿಂತ ಕಡಿಮೆಗೆ ಯಾರೂ ಕೊಳ್ಳುವಂತೆಯೇ ಇರಬಾರದು. ಆಗ ರೈತರಿಗೆ ಅಲ್ಪ ಸಹಕಾರವಾದರೂ ಸಿಗುತ್ತದೆ ಎನ್ನುವ ವಾದಕ್ಕೆ ಮತ್ತಷ್ಟು ಬಲ ಸಿಗಬೇಕಿದೆ.

ರೈತರ ಸಂಕಷ್ಟ

  • ಕೆಲವು ಅಕ್ಕಿ ಗಿರಣಿಗಳ ಏಕಸ್ವಾಮ್ಯದಿಂದ ಬೆಲೆ ಕಡಿತ, ಕಾರ್ವಿುಕ ವೆಚ್ಚ ಏರಿಕೆ
  • ಮಾರುಕಟ್ಟೆ ದರದಲ್ಲಿ ಏರಿಳಿತ, ಅಂತಿಮ ಭಾಗಕ್ಕೆ ಮುಟ್ಟದ ನಾಲೆಯ ನೀರು
  • ಫಸಲ್ ಬಿಮಾ ಯೋಜನೆಯ ಲೋಪಗಳು, ಬೆಳೆ ಅಡಮಾನ ಸಾಲಕ್ಕೆ ಸಹಕರಿಸದ ಬ್ಯಾಂಕ್

ಎಂಎಸ್​ಪಿ ಮಾನದಂಡ

ಪ್ರತಿ ಕ್ವಿಂಟಾಲ್ ಭತ್ತ ಬೆಳೆಯಲು 2 ಸಾವಿರ ರೂ. ವೆಚ್ಚವಾಗುತ್ತಿರುವಾಗ 1,800 ರೂ. ಆಸುಪಾಸಿನ ಎಂಎಸ್​ಪಿ ನಿಗದಿಪಡಿಸುವುದೇ ಪ್ರಶ್ನಾರ್ಹ. ಆ ದರ ಪಡೆಯಲು ವಿಧಿಸಿರುವ ಮಾನದಂಡ ಕಂಡ ರೈತರು ಸರ್ಕಾರದ ಸಹವಾಸವೇ ಬೇಡ ಎಂದು ದೂರ ಉಳಿಯುತ್ತಿದ್ದಾರೆ. ‘ಬೆಂಬಲ ಬೆಲೆ ಎಂಬುದೇ ನಾಟಕ. ಸ್ವಲ್ಪ ಹಸಿಯಿದ್ದರೆ ಪಡೆಯುವುದಿಲ್ಲ ಎಂಬುದೂ ಸೇರಿ ಅನೇಕ ಕಾರಣಕ್ಕಾಗಿ ಸ್ಥಳೀಯ ದಲ್ಲಾಳಿಗೆ ಬೆಂಬಲ ಬೆಲೆಗಿಂತಲೂ 200-400 ರೂ. ಕಡಿಮೆಗೆ ಮಾರುತ್ತೇವೆ’ ಎನ್ನುತ್ತಾರೆ ಟಿ. ನರಸೀಪುರದ ರೈತ ಸಿ. ಹೊನ್ನಯ್ಯ.

| ರಮೇಶ ದೊಡ್ಡಪುರ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net