ಮಳೆ ನೀರಲ್ಲಿ ಕೊಚ್ಚಿಹೋದ ಕೃಷಿಕನ ಶ್ರಮ

web 1
Published on

ಮೂಡಿಗೆರೆ: ಮೂರು ದಿನದಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಣದಲ್ಲಿದ್ದ ಕಾಫಿ ನೀರಲ್ಲಿ ಕೊಚ್ಚಿಹೋಗಿದೆ. ಕಟಾವಾದ ಭತ್ತ ನೀರಲ್ಲಿ ಮುಳುಗಿದ್ದು ರೈತರಿಗೆ ದಿಕ್ಕೇ ತೋಚದಂತಾಗಿದೆ.

ಹಗಲು ಮೋಡ ಕವಿದ ವಾತಾವರಣ. ರಾತ್ರಿಯಿಂದ ಬೆಳಗಿನವರೆಗೂ ಮಳೆಯಾಗುತ್ತಿದೆ. ಕಾಫಿ ಕೊಯ್ಲಿಗೆ ಬಂದಿರುವಾಗಲೇ ಮಳೆಯಿಂದ ಹೂವು ಅರಳುತ್ತಿದೆ. ಇದರಿಂದ ಮುಂದಿನ ವರ್ಷದ ಬೆಳೆಯೂ ಕಡಿಮೆಯಾಗುವ ಸಾಧ್ಯತೆ ಇದೆ.

ಗ್ರಾಪಂ ಚುನಾವಣೆ ಮುಗಿದ ನಂತರ ಕಾರ್ವಿುಕರನ್ನು ಹುಡುಕಿ ತೋಟಕ್ಕೆ ಕರೆದೊಯ್ಯುತ್ತಿರುವ ಬೆಳೆಗಾರರು ಕಾಫಿ ಕೊಯ್ಲಿಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ರಾತ್ರಿಯಾಗುತ್ತಿದ್ದಂತೆ ದಿಢೀರ್ ಸುರಿಯುವ ಮಳೆ ಬೆಳೆ ಜತೆಗೆ ರೈತರ ಜೀವನವನ್ನೂ ಕೊಚ್ಚಿಹೋಗುವಂತೆ ಮಾಡುತ್ತಿದೆ. ಬೆಳೆಗಾರರು ಏನು ಮಾಡಬೇಕೆಂದು ತೋಚದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಅಕಾಲಿಕ ಮಳೆಯಿಂದ ತಾಲೂಕಿನಲ್ಲಿ 20 ಲಕ್ಷ ರೂ. ಮೌಲ್ಯದ ಕಾಫಿ ನೀರು ಪಾಲಾಗಿದೆ. ಉಳಿದ ಕಾಫಿಯನ್ನು ರಾಶಿ ಮಾಡಿ ಟಾರ್ಪಲ್​ನಲ್ಲಿ ಮುಚ್ಚಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net