ಪಾಳು ಬಿದ್ದ ಜಮೀನಿನಲ್ಲಿ ಭತ್ತ ಬೆಳೆಯುವ ಯೋಜನೆ

Paddy
Published on

ಮಡಿಕೇರಿ:

ಪಾಳುಬಿದ್ದಿರುವ ಕೃಷಿ ಜಮೀನಿನಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ವತಿಯಿಂದಲೇ ಭತ್ತ ಬೆಳೆಯುವ ಯೋಜನೆ ರೂಪಿಸಲಾಗಿದೆ ಎಂದು ವಿಶ್ವವಿದ್ಯಾಲಯ ಕುಲಪತಿ ಡಾ. ಆರ್.ಸಿ. ಜಗದೀಶ ತಿಳಿಸಿದ್ದಾರೆ. ಪೊನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕೊಡಗು ವಿಜ್ಞಾನ ವೇದಿಕೆಯ ಬೆಳ್ಳಿಹಬ್ಬ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಬಹುತೇಕ ರೈತರು ಭತ್ತ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕೊಡಗು ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರದೇಶ 30 ಸಾವಿರ ಹೆಕ್ಟೇರ್‌ನಿಂದ 10 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಕೊಡಗಿನಲ್ಲಿ ಸಾಂಪ್ರದಾಯಿಕ ರೀತಿಯ ಭತ್ತದ ತಳಿಗಳನ್ನು ಬೆಳೆಯಲು ಉತ್ತಮ ಅವಕಾಶಗಳಿದ್ದು, ಇಂಥ ತಳಿಯ ಭತ್ತವನ್ನು ಇಲ್ಲಿಯ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಡಲು ನಿರ್ಧರಿಸಲಾಗಿದೆ. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ 300ಕ್ಕೂ ಹೆಚ್ಚು ತಳಿಯ ಭತ್ತ ಬೆಳೆಯಲಾಗುತ್ತಿದೆ. ಸರ್ಕಾರದ ಸಹಕಾರದಿಂದ ಪಾಳು ಬಿದ್ದ ಜಾಗದಲ್ಲೂ ಭತ್ತ ಬೆಳೆಯುವ ಯೋಜನೆ ತಯಾರಾಗಿದೆ.

ಕಾಫಿ ರಫ್ತು ಮಾಡುವುದರಿಂದ ಉತ್ತಮ ಆದಾಯ ಬರುತ್ತಿದೆ. ಹಾಗಾಗಿ ಕಾಫಿ ಬೆಳೆಗಾರರು ಶ್ರೀಮಂತ ಜೀವನ ನಡೆಸುತ್ತಿದ್ದಾರೆ ಎನ್ನುವ ಭಾವನೆ ಇದೆ. ಇದಕ್ಕೆ ಪೂರಕವಾಗಿ ಇತರ ಜಿಲ್ಲೆಗಳ ರೈತರಿಗೆ ಹೋಲಿಸಿದರೆ ಕೊಡಗಿನ ಕೃಷಿಕರ ತಲಾ ಆದಾಯ ಹೆಚ್ಚಿದೆ. ಆದರೆ ಕಾಫಿ ಬೆಳೆಗಾರರನನ್ನು ಹಲವು ರೀತಿಯ ಸಮಸ್ಯೆಗಳು ಕಾಡುತ್ತಿದೆ.

ಮೊದಲೆಲ್ಲಾ ಸಾಮಾನ್ಯ ಮತ್ತು ಫಿಲ್ಟರ್ ಎನ್ನುವ 2 ರೀತಿಯ ಕಾಫಿ ಮಾತ್ರ ಇತ್ತು. ಈಗ 150ಕ್ಕೂ ಹೆಚ್ಚು ಬಗೆಯ ಕಾಫಿ ಬಳಕೆಯಲ್ಲಿ ಇದೆ. ಈ ರೀತಿಯಾಗಿ ಕಾಫಿಯಲ್ಲಿ ವೈವಿಧ್ಯತೆ ಮತ್ತು ಮೌಲ್ಯವರ್ಧನೆಯಿಂದ ಹೆಚ್ಚು ಬೆಲೆ ಪಡೆಯಬಹುದು. ಕಾಫಿ ಬೆಳೆಗಾರರು ಜೇನು ಸಾಕಾಣಿಕೆ ಮಾಡಬಹುದು. ಇದರಿಂದ ಪರಾಗಸ್ಪರ್ಶಕ್ಕೂ ಅನುಕೂಲ.

ಭತ್ತ ಬೇಸಾಯವನ್ನು ಲಾಭದಾಯಕ ಮಾಡಲು ಭತ್ತದ ಗದ್ದೆಯಲ್ಲೇ ಮೀನು ಕೃಷಿಯನ್ನೂ ಮಾಡಬಹುದಾಗಿದೆ. ಇದು ಭವಿಷ್ಯದ ಬೆಳೆ ಪದ್ಧತಿಯೂ ಹೌದು. ಟೆರೆಸ್ ಮೀನು ಕೃಷಿಯೂ ಉತ್ತಮ ಆದಾಯದ ಮೂಲವಾಗಬಲ್ಲದು. ಈ ಸಂಬAಧ ಪ್ರಯೋಗ ನಡೆದಿದೆ. ನಮ್ಮ ವಿದ್ಯಾರ್ಥಿಗಳನ್ನು ಉದ್ಯೋಗಿಗಳನ್ನಾಗಿ ಮಾಡುವ ಬದಲು ಉದ್ಯಮಿಗಳನ್ನಾಗಿ ಮಾಡಲು ಆದ್ಯತೆ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ. ಜಿ.ಎನ್. ದೇವಗಿರಿ ಮಾತನಾಡಿ ಜಿಪಿಎಸ್ ಮುಖಾಂತರ ನೋಡಿದರೆ ಕೊಡಗಿನ ಕಾಡು ಮತ್ತು ಕಾಫಿ ತೋಟಗಳ ಮಧ್ಯೆ ವತ್ಯಾಸ ಕಂಡು ಬರದಷ್ಟು ಹಸಿರು ಇದೆ. ಇಂಥ ಹಸಿರು ಕಾಪಾಡಿಕೊಳ್ಳುವಲ್ಲಿ ಕಾಫಿ ಬೆಳೆಗಾರರ ಪಾತ್ರ ಮಹತ್ವದ್ದು. ಎನ್‌ಜಿಒ ಆಗಿರುವ ಕೊಡಗು ವಿಜ್ಞಾನ ವೇದಿಕೆ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಮಣ್ಣು, ಮಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವುದಲ್ಲದೆ ಜಿಲ್ಲೆಯಲ್ಲಿ ಭತ್ತ ಬೆಳೆ ಪುನರುಜ್ಜೀವನಕ್ಕೆ ಶ್ರಮಿಸಲಾಗುತ್ತಿದೆ ಎಂದರು.

ಕೊಡಗು ವಿಜ್ಞಾನ ವೇದಿಕೆ ಅಧ್ಯಕ್ಷ ಡಾ. ಸಿ.ಜಿ. ಕುಶಾಲಪ್ಪ ಮಾತನಾಡಿ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಹಾಗೂ ಪೊನ್ನಂಪೇಟೆಯ ಅರಣ್ಯ ಕಾಲೇಜು ಕಾಫಿ ಬೆಳೆಗಾರರು ಮತ್ತು ರೈತರ ಬೇಡಿಕೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಜಿಲ್ಲೆಯಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷ ದೊಡ್ಡ ಸಮಸ್ಯೆ ಆಗಿದದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡು ಹುಡುಕುವ ಕೆಲಸ ಆಗಬೇಕು ಎಂದರು.

ಇದಕ್ಕೂ ಮೊದಲು ಬೆಳಗ್ಗೆ ನಡೆದ ಸಮಾರಂಭದಲ್ಲಿ ಕೊಡಗು ವಿಜ್ಞಾನ ವೇದಿಕೆ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಸರ್ಕಾರದ ಕೃಷಿ ಇಲಾಖೆ ನಿರ್ದೇಶಕ ಡಾ. ಜಿ.ಟಿ. ಪುತ್ರ ಉದ್ಘಾಟಿಸಿದರು. ಸಂಸ್ಥೆಯ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net