ಶುದ್ಧ ಮನಸ್ಸಿನಿಂದ ಪ್ರವಚನ ಆಲಿಸಿ, ಶ್ರೀ ರೇವಣಸಿದ್ದೇಶ್ವರ ಮಹಾರಾಜರು

IMG-20231002-WA0017-1.jpg
Published on

ಹುಬ್ಬಳ್ಳಿ: ಶುದ್ಧ ಮನಸ್ಸಿನಿಂದ ಆಲಿಸುವ ಪ್ರವಚನವು ಅಂತರಂಗಕ್ಕೆ ತಲುಪಿ ಜೀವನ ಪಾವನವಾಗಲು ಸಹಾಯವಾಗುತ್ತದೆ ಎಂದು ವಿಜಯಪುರ ಜಿಲ್ಲೆಯ ಶ್ರೀ ಕ್ಷೇತ್ರ ಇಂಚಗೇರಿ ಮಠದ ಪೀಠಾಧಿಪತಿ ಶ್ರೀ ರೇವಣಸಿದ್ದೇಶ್ವರ ಮಹಾರಾಜರು ಹೇಳಿದರು.

ಇಲ್ಲಿಯ ವಿದ್ಯಾನಗರ ಶ್ರೀ ಗಿರೀಶ ಆಶ್ರಮದಲ್ಲಿ ಸೋಮವಾರ ಮೂರು ದಿನಗಳವರೆಗೆ ಜರುಗಿದ ಭಾದ್ರಪದ ಜ್ಞಾನಯಜ್ಞ ಸಾಧನ ಸಪ್ತಾಹ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮನಸನ್ನು ಹತೋಟಿಯಲ್ಲಿಟ್ಟುಕೊಂಡು ಬದುಕು ನಡೆಸುವ ಪ್ರತಿಯೊಬ್ಬರು ಜೀವನಮುಕ್ತಿ ಪಡೆಯಲು ಸಾಧ್ಯ. ಇಂಚಗೇರಿ ಮಠವು ಆಧ್ಯಾತ್ಮ ತಳಹದಿ ಮೇಲೆ ವಿಶ್ವಾಸವಿಟ್ಟುಕೊಂಡು ನಡೆದು ಬಂದಿದೆ. ಸರ್ವ ಧರ್ಮ ಭಾವೈಕ್ಯದ ಕೇಂದ್ರ ಬಿಂದುವಾಗಿರುವ ಶ್ರೀಮಠಕ್ಕೆ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ ಎಂದರು.

ಪ್ರೊ. ಶಶಿಕಾಂತ ಶಿವನೂರ ಮಾತನಾಡಿ, ಇಂಚಗೇರಿ ಮಠವು ಯಾವುದೇ ಆಡಂಬರವಿಲ್ಲದೇ ಸರ್ವ ಧರ್ಮದ ಭಕ್ತಿ ಕೇಂದ್ರವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.

ಗೋಪಾಲ ಮುರಗೋಡ ಮಹಾರಾಜರು, ಶಂಕರಪ್ಪ ಮಹಾರಾಜರು, ಅಪ್ಪಾಸಾಬ ಮಹಾರಾಜರು, ರಾಮಣ್ಣ ಮಹಾರಾಜರು, ಸಂಗಪ್ಪ ಸಾಲಿ ಮಹಾರಾಜರು, ತಮ್ಮಣ್ಣಪ್ಪ ಮಹಾರಾಜರು, ನಾಮದೇವ ಮಹಾರಾಜರು, ಕರೆಪ್ಪ ಮೇಟಿ ಮಹಾರಾಜರು, ಗಿರಿಮಲ್ಲಪ್ಪ ಬೆಳವಡಿ, ಭಕ್ತರು ಉಪಸ್ಥಿತರಿದ್ದರು.

ಭಾವೈಕ್ಯ ಪಾದಯಾತ್ರೆ: ವಿಜಯಪುರ ಜಿಲ್ಲೆಯ ಇಂಚಗೇರಿ ಮಠದಲ್ಲಿ ನವೆಂಬರ್ 2ರಂದು ಜರುಗುವ ಶ್ರೀ ಮಾಧವಾನಂದ ಪ್ರಭುಜಿ ಅವರ 108ನೇ ಜಯಂತಿ ಅಂಗವಾಗಿ ಮಹಾತ್ಮ ಗಾಂಧಿ ಜಯಂತಿಯಂದು ಹುಬ್ಬಳ್ಳಿ ಮಹಾನಗರದಿಂದ ಸರ್ವಧರ್ಮ ಭಾವೈಕ್ಯ ಪಾದಯಾತ್ರೆಗೆ ರೇವಣಸಿದ್ದೇಶ್ವರ ಮಹಾರಾಜರು ಚಾಲನೆ ನೀಡಿದರು.

ಒಂದು ತಿಂಗಳು ಜರುಗುವ ಪಾದಯಾತ್ರೆಯಲ್ಲಿ ಗೋ ಹತ್ಯೆ ನಿಷೇಧ, ಸರ್ವಧರ್ಮ ಭಾವೈಕ್ಯ ಸಂದೇಶಗಳನ್ನು ಪ್ರತಿ ಗ್ರಾಮದಲ್ಲಿ ತಿಳಿಸಲಾಗುವುದು. ಜತೆಗೆ ಕ್ರಾಂತಿಯೋಗಿ, ಸ್ವಾತಂತ್ರ್ಯ ಹೋರಾಟಗಾರ ಮಾಧವಾನಂದ ಪ್ರಭುಜಿ ಜೀವನ ಚರಿತ್ರೆ ಕುರಿತ ಧಾಮಿರ್ಕ ಕಾರ್ಯಕ್ರಮಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net