

ಕುಶಾಲನಗರ:
ಕುಶಾಲನಗರ ತಾಲೂಕು ಚಿಕ್ಕ ಅಳುವಾರದಲ್ಲಿ ಇರುವ ಕೊಡಗು ವಿಶ್ವವಿದ್ಯಾಲಯವನ್ನು ಕರ್ನಾಟಕ ರಾಜ್ಯ ಸರ್ಕಾರ ಅನುದಾನದ ಕೊರತೆ ಮುಂದೆ ಇಟ್ಟುಕೊಂಡು ಮುಚ್ಚುವ ಪ್ರಕ್ರಿಯೆಗೆ ಮುಂದಾಗಿದೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ ಶುಕ್ರವಾರ ಪಾದಯಾತ್ರೆ ನಡೆಸಿ ಪ್ರತಿಭಟಿಸಲಾಯಿತು. ಕೊಡಗು - ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಚಿವ ಅಪ್ಪಚ್ಚು ರಂಜನ್, ಬಿಜೆಪಿ ಮುಖಂಡರು, ಎಬಿವಿಪಿ ಮುಖಂಡರು, ವಿದ್ಯಾರ್ಥಿಗಳು, ಪೋಷಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾಲಯ ಆವರಣದಿಂದ ಕುಶಾಲನಗರದವರೆಗೆ ಹೆದ್ದಾರಿಯ ಮೂಲಕ ಸುಮಾರು 16 ಕಿ.ಮಿ. ದೂರವನ್ನು ಪಾದಯಾತ್ರೆಯಲ್ಲಿ ಕ್ರಮಿಸಿ ಕುಶಾಲನಗರದ ಕಾರ್ಯಪ್ಪ ವೃತ್ತಕ್ಕೆ ಆಗಮಿಸಲಾಯಿತು. ಇಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಈ ಸಂದರ್ಭ ಸಂಸದ ಯದುವೀರ್ ಒಡೆಯರ್, ಎಬಿವಿಪಿ ರಾಷ್ಟಿçÃಯ ಕಾರ್ಯಕಾರಿಣಿ ಸದಸ್ಯೆ ಮಂದಾರ, ಜಿಲ್ಲಾ ಪ್ರಮುಖರಾದ ಅಂಬಿಕಾ, ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿದರು.
ಕೊಡಗಿನ ಏಕೈಕ ವಿಶ್ವವಿದ್ಯಾಲಯವನ್ನು ಅನುದಾನದ ಕೊರತೆ ನೆಪ ಮುಂದೆ ಇಟ್ಟುಕೊಂಡು ಮುಚ್ಚುವ ಪ್ರಕ್ರಿಯೆ ಅಥವಾ ಬೇರೆ ವಿವಿ ಜತೆಯಲ್ಲಿ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಲಾಯಿತು. ಯಾವುದೇ ಕಾರಣಕ್ಕೂ ವಿವಿಯನ್ನು ಬಂದ್ ಮಾಡಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ವಿವಿಯನ್ನು ಉಳಿಸಿಕೊಳ್ಳಲು ವಿಭಿನ್ನ ರೀತಿಯಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಲು ಕೂಡ ನಾವು ಸಿದ್ದ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ನಂತರ ಎಬಿವಿಪಿ ಮುಖಂಡರು ಸಂಸದರಿಗೆ ಮತ್ತು ತಹಸೀಲ್ದಾರ್‌ಗೆ ವಿವಿ ಬಂದ್ ಮಾಡದಂತೆ ಸರ್ಕಾರದ ಗಮನಕ್ಕೆ ತರಲು ಮನವಿ ಸಲ್ಲಿಸಲಾಯಿತು.