'ಕೊಡವಾಮೆ ಬಾಳೋ' ಪಾದಯಾತ್ರೆ ಸಮಾರೋಪ

padayatre
Published on

ಮಡಿಕೇರಿ:

ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಕುಟ್ಟದಿಂದ ಆರಂಭವಾಗಿದ್ದ ಕೊಡವ ಭಾಷಿಕರ 'ಕೊಡವಾಮೆ ಬಾಳೋ' ಪಾದಯಾತ್ರೆಯ ಸಮಾರೋಪ ಮಡಿಕೇರಿಯಲ್ಲಿ ಶುಕ್ರವಾರ ನಡೆಯಿತು. ತಮ್ಮ ಸಂಸ್ಕೃತಿ, ಆಚಾರ, ವಿಚಾರ ಹಾಗೂ ಉಡುಗೆ ತೊಡುಗೆಗಳ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಯಿಂದ ರಕ್ಷಣೆ ನಿಡಬೇಕು ಎಂದು ಆಗ್ರಹಿಸಿ 6 ದಿನಗಳ ಕಾಲ ಸುಮಾರು 80 ಕಿಮೀ ಪಾದಯಾತ್ರೆ ನಡೆಸಲಾಯಿತು.

'ನಮ್ಮ ಸಂಸ್ಕೃತಿ ನಮ್ಮ ಹಕ್ಕು' ಎಂಬ ಘೋಷವಾಕ್ಯದ ಅಡಿಯಲ್ಲಿ ನಡೆದ ಪಾದಯಾತ್ರೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿತ್ತು, ಶುಕ್ರವಾರ ನಡೆದ ಕೊನೆಯ ದಿನ ಪಾದಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಕೊಡವರು ಮತ್ತು ಕೊಡವ ಭಾಷಿಕರು ಸೇರಿದ್ದರು. ಕೊಡಗು ಮಾತ್ರವಲ್ಲದೆ ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ದೂರದ ಊರುಗಳಿಂದಲೂ ಮಡಿಕೇರಿಗೆ ಆಗಮಿಸಿದ ಕೊಡವರು ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.

ಜ. ಕಾರ್ಯಪ್ಪ ವೃತ್ತದಿಂದ ಕೆಎಸ್‌ಆರ್‌ಟಿಸಿ ಡಿಪೋ ಮಾರ್ಗದಲ್ಲಿ ಮೈಸೂರು ರಸ್ತೆ ಮೂಲಕ ಮತ್ತು ಮೇಕೇರಿ ಕಡೆಯಿಂದ ಮೂರ್ನಾಡು ರಸ್ತೆ ಮೂಲಕ ಎರಡೂ ರಸ್ತೆಯಲ್ಲಿ ಜ. ತಿಮ್ಮಯ್ಯ ವೃತ್ತದ ಕಡೆಗೆ ಕೊಡವರು ಮತ್ತು ಕೊಡವ ಭಾಷಿಕರು ಬೃಹತ್ ಸಂಖ್ಯೆಯಲ್ಲಿ ಪಾದಯಾತ್ರೆ ಮೂಲಕ ಆಗಮಿಸಿ ನಂತರ ಅಲ್ಲಿ ಎಲ್ಲರೂ ಒಟ್ಟು ಸೇರಿ ಮಂಗೇರಿರ ಮುತ್ತಣ್ಣ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ, ಗುಡ್ಡೆಮನೆ ಅಪ್ಪಯ್ಯ ಗೌಡ ರಸ್ತೆ ಮೂಲಕ ಮಡಿಕೇರಿಯ ಮಂದ್ ಮೈದಾನ ತಲುಪಿದರು. ಪಾದಯಾತ್ರೆಯ ಉದ್ದೇಶ ಮತ್ತು ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಹ್ಮಣಿ ಕಾವೇರಪ್ಪ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಸಲ್ಲಿಸಿದರು.

ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಜನಾಂಗದ ಸಂವಿಧಾನಬದ್ಧ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಕೊಡವ ಜನಾಂಗದ ಪರಂಪರೆ, ಧಾರ್ಮಿಕ ಆಚರಣೆಗಳು, ಸಾಮಾಜಿಕ ಭದ್ರತೆಗೆ ಪೂರಕವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೊಡವರು ಹಾಗೂ ಜಮ್ಮಾ ಹಿಡುವಳಿದಾರರ ಕೋವಿ ವಿನಾಯಿತಿಯ ವಿಶೇಷ ಹಕ್ಕನ್ನು ಅಭಾದಿತವಾಗಿ ಮುಂದುವರಿಸಬೇಕು. ಕೊಡವ ಸಮುದಾಯದ ಮೇಲೆ ಪ್ರಬಲ ಜನಾಂಗಗಳು ರಾಜಕೀಯ ಪ್ರಭಾವ ಬಳಸಿ ನಡೆಸುತ್ತಿರುವ ದಬ್ಬಾಳಿಕೆಗೆ ಕಡಿವಾಣ ಹಾಕಬೇಕು. ಕೊಡವ ಸಂಸ್ಕೃತಿ, ಸಂಪ್ರದಾಯ, ಉಡುಗೆ ತೊಡುಗೆ, ಆಭರಣಗಳು, ಆಚರಣೆಗಳ ವಿಡಂಬನಾತ್ಮಕ ಬಳಕೆ ಮತ್ತು ಕೊಡವರ ಭಾವನೆಗಳಿಗೆ ಧಕ್ಕೆ ತರುವ ಪ್ರಚೋದನಾತ್ಮಕ ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಸೇರಿದಂತೆ ಹಲವು ಒತ್ತಾಯಗಳನ್ನು ಈ ವೇಳೆ ಮಾಡಲಾಯಿತು. ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ, ಪಾದಯಾತ್ರಿಕರು ಸಲ್ಲಿಸಿದ ಮನವಿಯಲ್ಲಿ ಸರ್ಕಾರಕ್ಕೆ ಕಳುಹಿಸಲಾಗುವುದು. ಕೊಡಗಿನಲ್ಲಿ ಶಾಂತಿ ಕಾಪಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net