ಕೊಡವ ಭಾಷಿಕರ ಕೊಡವಾಮೆ ಬಾಳೋ ಪಾದಯಾತ್ರೆಗೆ ಚಾಲನೆ

padayatre
Published on

ಕುಟ್ಟ:

ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಆರಂಭವಾಗಿರುವ ಕೊಡವ ಭಾಷಿಕರ ಕೊಡವಾಮೆ ಬಾಳೋ ಪಾದಯಾತ್ರೆಗೆ ಜಿಲ್ಲೆಯ ಗಡಿಭಾಗ ಕುಟ್ಟದಲ್ಲಿ ಭಾನುವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಹ್ಮಣಿ ಸೇರಿದಂತೆ ವಿವಿಧ ಕೊಡವ ಸಮಾಜಗಳು ಹಾಗೂ ಕೊಡವ ಭಾಷಿಕ ಸಮುದಾಯಗಳ ಮುಖಂಡರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪಾದಯಾತ್ರೆ ಉದ್ಘಾಟಿಸಿದರು.

ನಮ್ಮ ಸಂಸ್ಕೃತಿ ನಮ್ಮ ಹಕ್ಕು ಎಂಬ ಘೋಷವಾಕ್ಯದ ಅಡಿಯಲ್ಲಿ 5 ದಿನಗಳ ಕಾಲ ಕುಟ್ಟದಿಂದ ಮಡಿಕೇರಿ ತನಕ ಕೊಡವಾಮೆ ಬಾಳೋ ಪಾದಯಾತ್ರೆ ನಡೆಯಲಿದ್ದು, ಕೊಡವ ಭಾಷಿಕರು, ಕೊಡವಾಭಿಮಾನಿಗಳು ಮೊದಲ ದಿನ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು ಉಡುಗೆ ತೊಡುಗೆಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದು ಅದರ ರಕ್ಷಣೆ ಆಗಬೇಕು ಎಂದು ಆಗ್ರಹಿಸಿ ಈ ಪಾದಯಾತ್ರೆ ಆಯೋಜಿಸಲಾಗಿದೆ. ಶುಕ್ರವಾರ ಜಿಲ್ಲಾ ಕೇಂದ್ರ ಮಡಿಕೇರಿ ತಲುಪಲಿದೆ.

ಕೊಡವ ಭಾಷಿಕ ಸಮುದಾಯಗಳ ಜನರು ತಮ್ಮ ಸಾಂಪ್ರದಾಯಿಕ ಉಡುಗೆಯಾದ ಕುಪ್ಯೆಚಾಲೆ ತೊಟ್ಟಿದ್ದರೆ, ಕೊಡವತಿಯರು ತಮ್ಮದೇ ಕೊಡವ ಸೀರೆ ತೊಟ್ಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ನಮ್ಮ ಸಂಸ್ಕೃತಿ ನಮ್ಮ ಹಕ್ಕು ಎಂಬ ನಾಮಫಲಕಗಳ ಹಿಡಿದು ಮೌನವಾಗಿ ಪಾದಯಾತ್ರೆಯಲ್ಲಿ ಸಾಗಿದರು. ಸುಮಾರು 3-4 ಕಿಮೀ ದೂರದ ತನಕ ಪಾದಯಾತ್ರಿಗಳು ರಸ್ತೆಯುದ್ದಕ್ಕೂ ವ್ಯಾಪಿಸಿ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.

ಮೊದಲ ದಿನ ಕುಟ್ಟದಿಂದ ಟಿ. ಶೆಟ್ಟಿಗೇರಿ ತನಕ 18 ಕಿಲೋ ಮೀಟರ್ ದೂರ ಕ್ರಮಿಸಲಾಯಿತು. ಉರಿ ಬಿಸಿಲನ್ನೂ ಲೆಕ್ಕಿಸಿದೇ ಕೊಡವ ಭಾಷಿಕರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಸಂಸ್ಕೃತಿ ರಕ್ಷಣೆಯ ನಿಟ್ಟಿನಲ್ಲಿ ತಮ್ಮ ಬದ್ಧತೆ ಪ್ರದರ್ಶಿಸಿದರು. ಮಧ್ಯಾಹ್ನದ ಪಾದಯಾತ್ರೆ ಕಾಕೂರು ತಲುಪಿದದ ವೇಳೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ಮಾತನಾಡಿದ ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್, ಇತ್ತೀಚಿನ ಕೆಲವು ವರ್ಷಗಳಿಂದ ಕೊಡವ ಭಾಷಿಕರ ಸಂಸ್ಕೃತಿ, ಆಚಾರ ವಿಚಾರ, ಉಡುಗೆ ತೊಡುಗೆಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ಖಂಡಿಸಿ ಕೊಡವ ಭಾಷಿಗರು ಪಾದಯಾತ್ರೆ ಆರಂಭಿಸಲಾಗಿದೆ. ಕುಟ್ಟದಿಂದ ಜಿಲ್ಲಾಕೇಂದ್ರ ಮಡಿಕೇರಿ ತನಕ ಒಟ್ಟು 80 ಕಿಲೋ ಮೀಟರ್ ಪಾದಯಾತ್ರೆ ನಡೆಸಲಾಗುವುದು. ಟಿ. ಶೆಟ್ಟಿಗೇರಿ, ಪೊನ್ನಂಪೇಟೆ, ಬಿಟ್ಟಂಗಾಲ, ಮೂರ್ನಾಡು ನಂತರ ಮೇಕೇರಿಗೆ ತಲುಪಿ ಅಲ್ಲಿಂದ ಮಡಿಕೇರಿ ತಲುಪಲಿದೆ. ಫೆಬ್ರವರಿ 7 ರಂದು ಮಡಿಕೇರಿಯಲ್ಲಿ ಕನಿಷ್ಠ 25 ಸಾವಿರ ಜನರು ಸೇರಲಿದ್ದಾರೆ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ದಬ್ಬಾಳಿಕೆ ಮಾಡಲು ಬಂದರೆ ಸುಮ್ಮನಿರಲ್ಲ ಎನ್ನುವುದರ ಎಚ್ಚರಿಕೆ ಇದು. ಇದು ಯಾರ ವಿರುದ್ಧವೂ ನಮ್ಮ ಪ್ರತಿಭಟನೆಯಲ್ಲ. ಇದು ನಮ್ಮ ಸಂಸ್ಕೃತಿ, ಆಚಾರ, ವಿಚಾರ ಉಡುಗೆ ತೊಡುಗೆಗಳ ರಕ್ಷಣೆಗಾಗಿ ನಡೆಯುತ್ತಿರುವ ಪಾದಯಾತ್ರೆ ಎಂದರು.

ಅಖಿಲ ಕೊಡವ ಸಮಾಜದ ಅಧ್ಯP್ಷÀ ಪರದಂಡ ಸುಬ್ರಮಣಿ ಮಾತನಾಡಿ, ನಿರಂತರವಾಗಿ ಕೊಡಗಿನ ಸಂಸ್ಕೃತಿ ಮೇಲೆ ದಬ್ಬಾಳಿಕೆಯಾಗುತ್ತಿದೆ. ಇಲ್ಲಿನ ಮೂಲ ನಿವಾಸಿಗಳಿಗೆ ಸ್ವತಂತ್ರವಾಗಿ ಬದುಕುವ ಹಕ್ಕು ಸಿಗುತ್ತಿಲ್ಲ. ಇಂಥ ಧೋರಣೆಯನ್ನು ಮತ್ತು ಸಮಾಜದಲ್ಲಿ ಎದ್ದಿರುವ ಅಶಾಂತಿಯನ್ನು ಸಮನಗೊಳಿಸುವ ಉz್ದೆÃಶಕ್ಕಾಗಿ ಕೊಡವರ ಮತ್ತು ಕೊಡವ ಭಾಷಿಕ ಜನಾಂಗದವರ ಸಂಸ್ಕೃತಿ ಭದ್ರತೆಗೆ ಶಾಂತಿಯುತ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net