

ನರಗುಂದ: ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರ ಎರಡನೆಯದಾಗಿದ್ದು, ಪುರಾಣ ಕಾಲದಿಂದಲೂ ಸುಕ್ಷೇತ್ರ ಶ್ರೀಶೈಲ ಯಾತ್ರೆಯು ಮೋಕ್ಷದಾಯಕ ತಾಣವೆಂಬ ನಂಬಿಕೆ ಎಲ್ಲರಲ್ಲಿದೆ ಎಂದು ಕೊಣ್ಣೂರ ವಿರಕ್ತಮಠದ ಡಾ. ಶಿವಾನಂದ ದೇವರು ಹೇಳಿದರು.
ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ 14ನೇ ವರ್ಷದ ಶಿವದೀಕ್ಷೆ ಸ್ವೀಕರಿಸಿದ ಶಿವಸ್ವಾಮಿಗಳು, ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಸೇವಾ ಸಮಿತಿ ಸದಸ್ಯರು ಸೋಮವಾರ ಹಮ್ಮಿಕೊಂಡಿದ್ದ 52ನೇ ವರ್ಷದ ಶ್ರೀಶೈಲ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಮಾತನಾಡಿ, ಮಾ. 10 ರಂದು ಕೊಣ್ಣೂರಿನಿಂದ ಆರಂಭಗೊಂಡಿರುವ 250 ಜನರ ಪಾದಯಾತ್ರೆಯು ಬಾದಾಮಿ, ರಾಯಚೂರ ಮಾರ್ಗವಾಗಿ ಒಟ್ಟು 18 ದಿನಗಳಲ್ಲಿ 600 ಕಿಲೋ ಮೀಟರ್ ಕ್ರಮಿಸಿ ಮಾ. 25 ರಂದು ಶ್ರೀಶೈಲದ ಪುಣ್ಯ ಕ್ಷೇತ್ರಕ್ಕೆ ತಲುಪಲಿದೆ ಎಂದು ತಿಳಿಸಿದರು.
ಪಾದಯಾತ್ರೆ ನಿಮಿತ್ತ ಕೊಣ್ಣೂರಿನ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳಗಳಿಂದ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಕೊಣ್ಣೂರ ಕಲ್ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯರು, ಪರಪ್ಪ ಸಾಹುಕಾರ, ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ಜನಮಟ್ಟಿ, ಗ್ರಾಪಂ ಸದಸ್ಯ ಕೊಟ್ರೇಶ ಕೊಟ್ಟರಶೆಟ್ಟಿ, ಚಂದ್ರಶೇಖರಗೌಡ ಸಾಲಿಗೌಡ್ರ, ಶಿವಪ್ಪ ವಾಲಿ, ಅಶೋಕ ಕಾಮಣ್ಣವರ, ಅಪ್ಪನಗೌಡ ಪಾಟೀಲ, ಕೃಷ್ಣಪ್ಪ ಸೋಮಾಪೂರ, ಬಿ.ಎಂ. ಕೋರಿಗಣ್ಣವರ, ಆನಂದ ನರಗುಂದ ಹಾಗೂ ಕೊಣ್ಣೂರ, ವಾಸನ, ಕಲಹಾಳ ಸುತ್ತಮುತ್ತಲಿನ ಗ್ರಾಮಗಳ ನೂರಾರು ಸದ್ಭಕ್ತರು ಪಾಲ್ಗೊಂಡಿದ್ದರು.