

ಶನಿವಾರಸಂತೆ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶನಿವಾರಸಂತೆ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 26ನೇ ವರ್ಷದ ಪಾದಯಾತ್ರೆಗೆ ಮಂಗಳವಾರ ಚಾಲನೆ ನೀಡಲಾಯಿತು.
ಶನಿವಾರಸಂತೆ ಭಾಗದ ನೂರಾರು ಪಾದಯಾತ್ರಿಗಳ ತಂಡ (ಮಾ.5 ರಿಂದ 7 ರವರೆಗೆ) ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳಲಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಪಾದಯಾತ್ರಿಗಳು ಪಟ್ಟಣದ ಶ್ರೀ ಪಾರ್ವತಿ ಚಂದ್ರಮೌಳೇಶ್ವರ ಗಣಪತಿ ದೇವಸ್ಥಾನದಲ್ಲಿ ಶ್ರೀ ವಿನಾಯಕ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ತದನಂತರ ಪಟ್ಟಣದ ಮುಖ್ಯರಸ್ತೆ ಮೂಲಕ ಪಾದಯಾತ್ರೆ ಆರಂಭಿಸಿದರು.
ಇದೇ ವೇಳೆ ಪಾದಯಾತ್ರಿಗಳ ತಂಡ ಶನಿವಾರಸಂತೆ ಅರಣ್ಯ ಇಲಾಖೆ ಸಿಬ್ಬಂದಿ ಜತೆಗೂಡಿ ಶನಿವಾರಸಂತೆ ಮುಖ್ಯರಸ್ತೆಯಿಂದ ಸಮೀಪದ ದುಂಡಳ್ಳಿ ಗ್ರಾಮದವರೆಗೆ ರಸ್ತೆ ಬದಿ ಬಿದ್ದಿದ್ದ ತ್ಯಾಜ್ಯ ವಸ್ತುಗಳನ್ನು ಹೆಕ್ಕಿ ಶ್ರಮದಾನ ಮಾಡಿದರು. ಚಂಗಡಹಳ್ಳಿ, ಕೂಡುರಸ್ತೆ, ವನಗೂರು, ಬಿಸ್ಲೆ, ಸುಬ್ರಮಣ್ಯ ರಸ್ತೆ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದ ಬೆಳೆಸಿದರು.