

ಹೊಸದುರ್ಗ: ಸ್ವಾತಂತ್ರೃ ತಂದುಕೊಟ್ಟ ಕಾಂಗ್ರೆಸ್ ಪಕ್ಷ ಬಿಜೆಪಿಮುಕ್ತ ಭಾರತಕ್ಕೆ ಹೋರಾಟ ಕೈಗೊಂಡಿದೆ ಎಂದು ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿರುವ 75 ಕಿ.ಮೀ. ದೂರದ ಅಮೃತ ನಡಿಗೆಗೆ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕಾಗಿ ಹುಟ್ಟಿದ ಪಕ್ಷವಲ್ಲ. ಪರಕೀಯರ ಕೈಯಿಂದ ದೇಶಮುಕ್ತಗೊಳಿಸಿದ ದೇಶಪ್ರೇಮಿ ಪಕ್ಷ. ಕೋಮುವಾದ ಬಿತ್ತುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸುವ ಸಂಕಲ್ಪ ಮಾಡಿದೆ ಎಂದರು.
ದೇಶದ ಸಾರ್ವಭೌಮತೆ, ಐಕ್ಯತೆ ಕಾಪಾಡುವ ಶಕ್ತಿ ಕಾಂಗ್ರೆಸ್‌ಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು ಎಂದರು.
ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಬಿಜೆಪಿ ಪಾತ್ರವಿಲ್ಲ. ಇದೀಗ ಆ ಪಕ್ಷದ ನಾಯಕರು ದೇಶ ಪ್ರೇಮದ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಪ್ಪ ಮಾತನಾಡಿ, ಸ್ವಾತಂತ್ರ್ಯದ ಮಹತ್ವ ಹಾಗೂ ಕಾಂಗ್ರೆಸ್ ಸಾಧನೆಗಳನ್ನು ಪರಿಚಯಿಸಲು ಹೊಸದುರ್ಗ ಕ್ಷೇತ್ರ ವ್ಯಾಪ್ತಿಯಲ್ಲಿ 75 ಕಿ.ಮೀ.ಪಾದಯಾತ್ರೆ ಆಯೋಜಿಸಲಾಗಿದೆ ಎಂದರು.
ಕ್ಷೇತ್ರದಲ್ಲಿ ಐದು ದಿನ ಸಂಚಾರ
ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿರುವ 75 ಕಿ.ಮೀ. ದೂರದ ಅಮೃತ ನಡಿಗೆ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಹೊಸದುರ್ಗದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ತಾಲೂಕಿನ ಮಾಡದಕೆರೆ, ಕಸಬಾ, ಮತ್ತೋಡು ಹೋಬಳಿಗಳಲ್ಲಿ 5 ದಿನ ಪಾದಯಾತ್ರೆ ಸಂಚರಿಸಲಿದೆ.