ರೈತ ಸಂಘದಿಂದ ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆ

13 yelandur 03
ಲೋಡ್ ಶೆಡ್ಡಿಂಗ್ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಯಳಂದೂರಿನ ಪ್ರವಾಸಿ ಮಂದಿರದ ಮುಂಭಾಗ ಶುಕ್ರವಾರ ಬಾರುಕೋಲುಗಳನ್ನು ಹಿಡಿದು ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆ ಹೊರಟರು.
Published on

ಯಳಂದೂರು: ರಾಜ್ಯ ಸರ್ಕಾರ ರೈತರಿಗೆ ನಿರಂತರವಾಗಿ ವಿದ್ಯುತ್ ನೀಡಬೇಕು ಹಾಗೂ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಿಂದ ಜಿಲ್ಲಾ ಕೇಂದ್ರಕ್ಕೆ ಶುಕ್ರವಾರ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ರಾಜ್ಯ ಬರದಿಂದ ತತ್ತರಿಸಿದೆ. ರಾಜ್ಯಾದ್ಯಂತ ಮಳೆ ಕೈಕೊಟ್ಟಿದೆ. ಜಲಾಶಯಗಳು ಬತ್ತಿವೆ, ರೈತರ ಬೆಳೆಗಳು ಒಣಗುತ್ತಿವೆ, ಸರ್ಕಾರವೇ ಹಲವು ಜಿಲ್ಲೆಗಳಲ್ಲಿ ಬರ ಘೋಷಣೆ ಮಾಡಿದೆ. ಇದರೊಂದಿಗೆ ರೈತರಿಗೆ ನಿಯಮಿತವಾಗಿ ವಿದ್ಯುತ್ ನೀಡದೆ. ಲೋಡ್‌ಶೆಡ್ಡಿಂಗ್ ಜಾರಿ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ಇದರಿಂದ ರಾಜ್ಯದ ರೈತರ ಹಿತವನ್ನು ಕಾಪಾಡುವಲ್ಲಿ ಸರ್ಕಾರ ಎಡವಿದೆ. ರೈತರಿಗೆ ನಿತ್ಯ 2 ರಿಂದ 3 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಆದರೆ ಇದು ಯಾವುದಕ್ಕೂ ಸಾಲುವುದಿಲ್ಲ. ನಿರಂತರವಾಗಿ ರೈತರಿಗೆ 12 ಗಂಟೆ ವಿದ್ಯುತ್ ನೀಡಬೇಕು, ಲೋಡ್ ಶೆಡ್ಡಿಂಗ್ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಜಿಲ್ಲಾದ್ಯಂತ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಧರಣಿಗಳೂ ನಡೆಯುತ್ತಿವೆ. ಇದಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಕೂಡಲೇ ಮುಖ್ಯಮಂತ್ರಿ ಲೋಡ್ ಶೆಡ್ಡಿಂಗ್ ನಿಲ್ಲಿಸುವ ಭರವಸೆ ನೀಡಬೇಕು. ಇದರೊಂದಿಗೆ ರೈತರಿಗೆ ಸರ್ಕಾರದಿಂದ ಲಭಿಸುವ ಸವಲತ್ತುಗಳನ್ನು ನೀಡಬೇಕು. ಇಲ್ಲವಾದಲ್ಲಿ ನಮ್ಮ ಪ್ರತಿಭಟನೆ ಹೀಗೆ ನಿರಂತರವಾಗಿ ಮುಂದುವರಿಯಲಿದೆ ಎಂದರು.

ಬಾರುಕೋಲುಗಳನ್ನು ಹಿಡಿದ ರೈತರು, ಕಹಳೆಯನ್ನು ಊದಿ ಇದಕ್ಕೆ ಚಾಲನೆ ನೀಡಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ, ಸಂತೆಮರಹಳ್ಳಿ ಮಾರ್ಗವಾಗಿ ಪಾದಯಾತ್ರೆ ಮೂಲಕ ಚಾಮರಾಜನಗರಕ್ಕೆ ತೆರಳಿದರು. ತಾಲೂಕು ಅಧ್ಯಕ್ಷ ಸಿದ್ದಲಿಂಗಸ್ವಾಮಿ, ಸೋಮಣ್ಣ, ವೃಷಭೇಂದ್ರಸ್ವಾಮಿ, ಶಿವಕುಮಾರ್, ಸುಂದ್ರಪ್ಪ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net