

ಪ್ರಜಾಪ್ರಬುತ್ವ ಸಾಮಾನ್ಯ ನಾಗರಿಕರ ಮತದಾರರ ಹೋರಾಟ
ಹೊಸಪೇಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕಾರ್ಯಕರ್ತೆಯರು, ಹೋಂ ಗಾರ್ಡ್, ಎಲ್ಲ ಗುತ್ತಿಗೆ ನೌಕರರ ಸೇವೆಯನ್ನು ಖಾಯಂಗೊಳಿಸಬೇಕು. ಚುನಾವಣೆಗಳಲ್ಲಿ ವಿಕಲ ಚೇತನರಿಗೆ ವಿಶೇಷ ಮೀಸಲು ಕಲ್ಪಿಸಬೇಕು ಎಂದು ಆಗ್ರಹಿಸಿ ಪ್ರಜಾಪ್ರಬುತ್ವ ಸಾಮಾನ್ಯ ನಾಗರಿಕರ ಮತದಾರರ ಹೋರಾಟ ಸಮಿತಿ ನಗರದಿಂದ ಬೆಂಗಳೂರಿಗೆ ಸೋಮವಾರ ಪಾದಯಾತ್ರೆ ಆರಂಭಿಸಿದರು.
ನಗರದ ಡಾ.ಪುನೀತ್ ರಾಜ್‌ಕುಮಾರ್ ಸರ್ಕಲ್‌ನಿಂದ ಆರಂಭಗೊAಡ ಪಾದಯಾತ್ರೆ, ಬಸ್ ನಿಲ್ದಾಣ, ನಗರಸಭೆ, ವಾಲ್ಮೀಕಿ ಸರ್ಕಲ್ ಮಾರ್ಗವಾಗಿ ಮರಿಯಮ್ಮನಹಳ್ಳಿಯತ್ತ ಸಾಗಿತು.
ಇದಕ್ಕೂ ಮುನ್ನ ಸಮಿತಿ ಸಂಸ್ಥಾಪಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮಾತನಾಡಿ, ಅಂಗವಿಕಲರ ಏಳಿಗಾಗಿ ವಿಆರ್‌ಡಬ್ಲ್ಯೂ, ವೈಆರ್ ಡಬ್ಲ್ಯೂ, ಎಂಆರ್‌ಡಬ್ಲ್ಯೂ ಶ್ರಮಿಸುತ್ತಿದ್ದಾರೆ. ಜನರ ಆರೋಗ್ಯ ಸುಧಾರಣೆಗಾಗಿ ಆಶಾ, ಮಕ್ಕಳಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ಅಂಗನವಾಡಿ ಹಾಗೂ ಜನರ ರಕ್ಷಣೆಗಾಗಿ ಗೃಹ ರಕ್ಷಕ ದಳ ಸಿಬ್ಬಂದಿ ವರ್ಷಗಳಿಂದ ಹಗಲಿರುಳು ದುಡಿಯುತ್ತಿದ್ದಾರೆ. ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅನೇಕ ಹುದ್ದೆಗಳಿಗೆ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಳ್ಳಲಾಗಿದೆ. ಗುತ್ತಿಗೆ ನೌಕರರು ಸಂಕಷ್ಟದಲ್ಲಿ ದಿನಕಳೆಯುತ್ತಿದ್ದು, ಅವರ ಸೇವೆ ಖಾಯಂ ಗೊಳಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಧರಣೀಶ್ವರಿ ಮಾತನಾಡಿ, ಅಂಗವಿಕಲರಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಸದನದಲ್ಲಿ ನಮ್ಮ ಪರವಾಗಿ ಧ್ವನಿ ಎತ್ತುವವರೇ ಇಲ್ಲ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮಾದರಿಯಲ್ಲಿ ಚುನಾವಣೆಯಲ್ಲಿ ಅಂಗವಿಕಲರಿಗೆ ಮೀಸಲಾತಿ ಒದಗಿಸಬೇಕು ಎಂಬ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಎಲ್ಲ ಸಂಘ, ಸಂಸ್ಥೆಗಳು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಪಾದಯಾತ್ರೆಯಲ್ಲಿ ಸಮಿತಿ ಅಧ್ಯಕ್ಷ ಎಂ.ಶರೀಫ್, ಕಾರ್ಯದರ್ಶಿ ಸಂತೋಷ್ ಕುಮಾರ್, ಪ್ರಮುಖರಾದ ರಮೇಶ ಚಲವಾದಿ, ಮಂಜುನಾಥ, ಉಮಾ ಶಂಕರ್ ಶಾಂತಾ ಸೇರಿದಂತೆ ಅಂಗವಿಕಲರು, ವಿವಿಧ ಸಂಘ, ಸಂಸ್ಥೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.