

ಮೈಸೂರು: ಭೂಮಿ ಕಳೆದುಕೊಂಡ ಸಂತ್ರಸ್ತರು ಮೈಸೂರು ತಾಲೂಕಿನ ವರುಣ ಹೋಬಳಿಯ ಕೋಚನಹಳ್ಳಿ ಗ್ರಾಮದಿಂದ ಪಾದಯಾತ್ರೆ ನಡೆಸಿದರು.
ಹೆರಿಟೇಜ್ ಗಾಲ್ಫ್ ಪ್ರೈ.ಲಿ. ಕಂಪನಿಯ ನಿರ್ದೇಶಕರು, ಬೇನಾಮಿ ವ್ಯಕ್ತಿಗಳ ವಿರುದ್ಧ ರೈತರಿಂದ ದೂರು ನೀಡಿದ್ದರೂ ವಂಚನೆ ಪ್ರಕರಣ ದಾಖಲಿಸಿಲ್ಲ. ಈ ವಿಳಂಬ ಧೋರಣೆಯನ್ನು ಖಂಡಿಸಿ ಗುರುವಾರ ಕಾಲ್ನಡಿಗೆ ಜಾಥಾ ನಡೆಸಿದರು.
ಭೂಮಿ ಕಳೆದುಕೊಂಡ ರೈತರು ಸುಮಾರು 965 ದಿನಗಳಿಂದ ಹೋರಾಟ ನಡೆಯುತ್ತಿದ್ದು, ಇದಕ್ಕೆ ಸ್ಪಂದನೆ ಸಿಗದಿದ್ದರಿಂದ ಅಸಮಾಧಾನಗೊಂಡ ರೈತರು ನಗರದ ಜಿಲ್ಲಾ ಪೊಲೀಸ್ ಕಚೇರಿಯತ್ತ ದೌಡಾಯಿಸುತ್ತಿದ್ದರು.
ಜಾಥಾ ಕಡಕೊಳ ದಾಟಿ ಮುಂದೆ ಸಾಗುವಷ್ಟರಲ್ಲಿ ಮಧ್ಯಪ್ರವೇಶಿಸಿದ ಮೈಸೂರು ಗ್ರಾಮಾಂತರ ಡಿವೈಎಸ್‌ಪಿ ಕರೀಮ್ ರಾವತ್ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಶೇಖರ್ ಅವರು, ರೈತರ ಬೇಡಿಕೆ ಈಡೇರಿಸಲು ನಾವು ಬಂದಿದ್ದೇವೆ ಎಂದು ಮುಖಂಡರ ಮನವೊಲಿಸಿದರು. ಬಳಿಕ ಕಡಕೊಳದ ಉಪ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿದರು.
ಬೇನಾಮಿ ಆಸ್ತಿ ಖರೀದಿದಾರರ ವಿರುದ್ಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಕಾಲ್ನಡಿಗೆ ಜಾಥಾವನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲಾಯಿತು.
ಮುಖಂಡರಾದ ಹೊಸಕೋಟೆ ಬಸವರಾಜು, ಚಂದ್ರಶೇಖರ್ ಮೇಟಿ, ಉಗ್ರ ನರಸಿಂಹಗೌಡ, ಬೊಕ್ಕಳ್ಳಿ ನಂಜುಂಡಸ್ವಾಮಿ, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್, ನೇತ್ರಾವತಿ, ರಾಘವೇಂದ್ರ, ಚಂದ್ರಶೇಖರ್, ಮಹೇಶ್, ಮುದ್ದುರಾಜು, ಜೆ.ಸ್ವಾಮಿ, ಚಲುವರಾಜು ಇನ್ನಿತರರಿದ್ದರು.