ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರು ಕಡೆ ಬಿಜೆಪಿ ಪಡೆ

51
Published on

ಮಾಯಕೊಂಡ: ಮುಡಾ, ವಾಲ್ಮೀಕಿ ಹಗರಣ, ವರ್ಗಾವಣೆ ದಂಧೆ ಸೇರಿ ಹತ್ತಾರು ಅಕ್ರಮಗಳನ್ನು ಮಾಡಿಕೊಂಡು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಹೋರಾಟ ನಿಲ್ಲದು ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಅನಿಲಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷಗಳು ಹಮ್ಮಿಕೊಂಡಿರುವ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸೋಮವಾರ ದಾವಣಗೆರೆ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತೆರಳುವ ಮಾರ್ಗ ಮಧ್ಯ ಆನಗೋಡು ಹೋಬಳಿ ಹೆಬ್ಬಾಳು ಟೋಲ್ ಪ್ಲಾಜಾ ಸಮೀಪ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಒಂದಾಗಿನಿಂದ ಹಗರಣಗಳ ಸರಮಾಲೆಯನ್ನೇ ಸೃಷ್ಟಿಸಿದೆ. ಸಿಎಂ, ಡಿಸಿಎಂ, ಯಾವೊಬ್ಬ ಸಚಿವರಿಗೂ ರಾಜ್ಯದ ಜನರ ಕಷ್ಟ ಸುಖಗಳು ಅರಿವಿಗೆ ಬರುತ್ತಿಲ್ಲ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಬಂದು ಜನ ಜೀವನ ಅಸ್ತವ್ಯಸ್ತಗೊಂಡಿರುವ ಇಂಥ ಕ್ಲಿಷ್ಟಕರ ಸಂದರ್ಭದಲ್ಲಿಯೂ ಸರ್ಕಾರ ಹಗರಣಗಳಲ್ಲೇ ಮುಳುಗಿದೆ ಎಂದು ಕಿಡಿಕಾರಿದರು.

ಸರ್ಕಾರ ಗ್ಯಾರಂಟಿಗಳಿಗೆ ರಾಜ್ಯದ ಬೊಕ್ಕಸ ಖಾಲಿ ಮಾಡಿದೆ. ಅಧಿಕಾರಕ್ಕೆ ಬಂದು ಒಂದು ವರ್ಷ ನಾಲ್ಕು ತಿಂಗಳು ಕಳೆದರೂ ಯಾವೊಬ್ಬ ಶಾಸಕರೂ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿಗೆ ತಂದಿದ್ದಾರೆ. ಮುಡಾದಲ್ಲಿ ನೂರಾರು ಕೋಟಿ ಮೊತ್ತದ ನಿವೇಶನ, ವಾಲ್ಮೀಕಿ ನಿಗಮದ ಹಗರಣಗಳಲ್ಲಿ ಸಚಿವರು ನೇರವಾಗಿ ಭಾಗಿಯಾಗಿ ಜೈಲಲ್ಲಿದ್ದರೂ ಮುಖ್ಯಮಂತ್ರಿ ಇನ್ನೂ ಅಧಿಕಾರದಲ್ಲಿ ಮುಂದುವರಿಯುವುದು ಯಾವ ನ್ಯಾಯ? ತಕ್ಷಣ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ದಾವಣಗೆರೆ ಜಿಲ್ಲೆಯಿಂದ 40 ಬಸ್‌ಗಳು, ನೂರಕ್ಕಿಂತ ಹೆಚ್ಚು ಖಾಸಗಿ ವಾಹನಗಳಲ್ಲಿ ಐದು ಸಾವಿರಕ್ಕಿಂತ ಅಧಿಕ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net