ಕಾಮಗಾರಿ ನಡೆದು ನಾಲ್ಕೇ ತಿಂಗಳಲ್ಲಿ ಫುಟ್‌ಪಾತ್ ಇಂಟರ್‌ಲಾಕ್ ಪುಡಿ ಪುಡಿ

mng--5 may padavinangadi Footpath 2
Published on

ಹರೀಶ್ ಮೋಟುಕಾನ

ಮಂಗಳೂರು: ಕಾಮಗಾರಿ ನಡೆದು ಇನ್ನೂ ಮಳೆಗಾಲ ಕಂಡಿಲ್ಲ. ನಾಲ್ಕು ತಿಂಗಳಲ್ಲಿ ಫುಟ್‌ಪಾತ್‌ಗೆ ಅಳವಡಿಸಿದ ಇಂಟರ್‌ಲಾಕ್ ಪುಡಿ ಪುಡಿಯಾಗಿ ಎದ್ದು ಹೋಗಿದೆ. ಗುತ್ತಿಗೆದಾರರು ಎಷ್ಟರ ಮಟ್ಟಿಗೆ ಗುಣಮಟ್ಟ ನಿರ್ವಹಣೆ ಮಾಡಿದ್ದಾರೆ ಎನ್ನವ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.


ಇದು ಪದವಿನಂಗಡಿಯಲ್ಲಿ ಮೇಯರ್ ಜಯಾನಂದ ಅಂಚನ್ ಅವರ ವಾರ್ಡ್‌ನಲ್ಲಿ ನಡೆದ ಕಾಮಗಾರಿ ಎನ್ನುವುದು ವಿಶೇಷ. ವಿಮಾನ ನಿಲ್ದಾಣ ರಸ್ತೆಯ ಬದಿಯಲ್ಲಿ ಹೊಸದಾಗಿ ಚರಂಡಿ ಹಾಗೂ ಫುಟ್‌ಪಾತ್ ನಿರ್ಮಾಣ ಮಾಡಲಾಗಿದೆ. ನಾಲ್ಕು ತಿಂಗಳ ಹಿಂದೆಯಷ್ಟೇ ಕಾಮಗಾರಿ ನಡೆದಿತ್ತು. ಮಳೆಗಾಲದಲ್ಲಿ ಉಳಿದ ಇಂಟರ್‌ಲಾಕ್‌ಗಳೆಲ್ಲವೂ ಸಂಪೂರ್ಣ ಎದ್ದು ಹೋಗುವುದರಲ್ಲಿ ಸಂಶಯವಿಲ್ಲ.


ಫುಟ್‌ಪಾತ್‌ಗೆ ಅಳವಡಿಸಿದ ಇಂಟರ್‌ಲಾಕ್‌ಗಳ ಪೈಕಿ ಬಹುತೇಕ ಒಡೆದು ಹೋಗಿವೆ. ಈ ಫುಟ್‌ಪಾತ್‌ನಲ್ಲಿ ಸಂಚರಿಸುವ ಪಾದಚಾರಿಗಳ ಸಂಖ್ಯೆ ಕಡಿಮೆ. ಆದರೂ ಬಿಸಿಲಿನ ಪ್ರಖರತೆಗೇ ಒಡೆದು ಹೋಗಿವೆ. ಹೆಚ್ಚು ಪುಡಿ ಪುಡಿಯಾದಲ್ಲಿ ಫುಟ್‌ಪಾತ್ ಮೇಲಿನಿಂದ ವಾಹನ ಕ್ರಾಸಿಂಗ್ ಆಗುತ್ತಿದ್ದು, ಇದರ ಪರಿಣಾಮ ಹೆಚ್ಚಿನ ಇಂಟರ್‌ಲಾಕ್ ಪುಡಿ ಪುಡಿಯಾಗಿವೆ. ಇನ್ನು ಫುಟ್‌ಪಾತ್ ಮೇಲೆ ನಡೆದು ಹೋಗಲು ಭಯದ ವಾತಾವರಣವಿದೆ. ಏಕೆಂದರೆ ಅದು ಎಷ್ಟರ ಮಟ್ಟಿಗೆ ಗಟ್ಟಿ ಮುಟ್ಟಾಗಿದೆ ಎಂಬುದರ ಬಗ್ಗೆ ಸಂಶಯವಿದೆ. ಚರಂಡಿಗೆ ಅಳವಡಿಸಿದ ಸ್ಲಾೃಬ್ ಕುಸಿದು ಬೀಳುವ ಅಪಾಯವಿದೆ ಎಂದು ಸ್ಥಳೀಯ ನಿವಾಸಿ ಕಿಶೋರ್ ತಿಳಿಸಿದ್ದಾರೆ.


ಇಂಜಿನಿಯರ್‌ಗಳ ನಿರ್ಲಕ್ಷೃ: ಯಾವುದೇ ಕಾಮಗಾರಿ ನಡೆದಾಗ ಅದರ ಬಿಲ್ ಪಾಸಾಗಬೇಕಾದರೆ ಪಾಲಿಕೆ ಇಂಜಿನಿಯರ್‌ಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಎಂದು ಮನವರಿಕೆಯಾದ ಬಳಿಕವಷ್ಟೇ ಬಿಲ್ ಪಾಸ್ ಮಾಡಬೇಕು. ಆದರೆ ಪಾಲಿಕೆ ಇಂಜಿನಿಯರ್‌ಗಳು ಬಹುತೇಕ ಕಾಮಗಾರಿಗಳನ್ನು ಪರಿಶೀಲಿಸುವುದೇ ಇಲ್ಲ. ಕಚೇರಿಯಲ್ಲೇ ಕುಳಿತು ಬಿಲ್ ಪಾಸ್ ಮಾಡುವ ಸನ್ನಿವೇಶ ಇದೆ. ಇದರಿಂದಾಗಿ ಕಾಮಗಾರಿಗಳಿಗೆ ವಿನಿಯೋಗಿಸಿದ ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆಯ ಹಣ ಉಪಯೋಗವಿಲ್ಲದಂತಾಗುತ್ತಿದೆ.


ಪಾಲಿಕೆ ಸದಸ್ಯರು ಗಮನಿಸುತ್ತಿಲ್ಲವೇ?: ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುವಾಗ ಪಾಲಿಕೆ ಸದಸ್ಯರು ಅದರ ಗುಣಮಟ್ಟ ಗಮನಿಸುವುದು ಕರ್ತವ್ಯ. ಆದರೆ ಮೇಯರ್ ವಾರ್ಡ್‌ನಲ್ಲೇ ಇಂತಹ ಕಾಮಗಾರಿ ನಡೆಯುವಾಗ ಅದನ್ನು ಸರಿಪಡಿಸದೆ ಇರುವುದು ದುರಂತ. ಇದು ಕೇವಲ ಬಿಲ್ ಮಾಡಲಷ್ಟೇ ಕಾಮಗಾರಿ ನಡೆಸಿದಂತಿದೆ. ಸಾರ್ವಜನಿಕರಿಗೆ ಉಪಯೋಗವಾಗುವಂತಿದ್ದರೆ ಇಷ್ಟು ಬೇಗ ಎದ್ದು ಹೋಗುತ್ತಿರಲಿಲ್ಲ ಎಂದು ಸ್ಥಳೀಯ ನಿವಾಸಿ ಪ್ರಮೋದ್ ಆರೋಪಿಸಿದ್ದಾರೆ.

ಫುಟ್‌ಪಾತ್ ಕಾಮಗಾರಿ ನಡೆದು ಕೆಲವೇ ತಿಂಗಳಿನಲ್ಲಿ ಇಂಟರ್‌ಲಾಕ್ ಹಾನಿಗೊಳಗಾಗುವುದಾದರೆ ಕಾಮಗಾರಿ ನಡೆಸಿರುವುದರಲ್ಲಿ ಲೋಪವಾಗಿರುವ ಸಾಧ್ಯತೆ ಇದೆ. ಯಾವ ಗುತ್ತಿಗೆದಾರರು ಕಾಮಗಾರಿ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು.
ಚನ್ನಬಸಪ್ಪ
ಆಯುಕ್ತರು ಮನಪಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net