

ರಾಮನಗರ: ಪಾದರಾಯನಪುರದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ರಾಮನಗರಕ್ಕೆ ವರ್ಗಾಯಿಸಿರುವ ಕ್ರಮದ ಔಚಿತ್ಯ ಪ್ರಶ್ನಿಸಿ ಕರೊನಾ ನಿರ್ಮೂಲನಾ ಸಮಿತಿ ಮತ್ತು ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ಹಲವು ಜಿಲ್ಲೆಗಳು ಕರೊನಾ ಸೋಂಕಿಗೆ ಸಿಲುಕಿ ಸಂಕಷ್ಟ ಎದುರಿಸುತ್ತಿವೆ. ರಾಮನಗರ ಜಿಲ್ಲೆ ಹಸಿರು ವಲಯವಾಗಿ ಇದುವರೆಗೂ ಕರೊನಾ ಸೋಂಕು ಮುಕ್ತವಾಗಿದೆ. ಇಂತಹ ಸಂದರ್ಭದಲ್ಲಿ ಕರೊನಾ ಹಾಟ್‌ಸ್ಪಾಟ್ ಎಂದೇ ಗುರುತಿಸಲ್ಪಟ್ಟ ಬೆಂಗಳೂರಿನ ಪಾದರಾಯನಪುರದಲ್ಲಿನ ಗೂಂಡಾಗಳನ್ನು ಜಿಲ್ಲಾ ಬಂದಿಖಾನೆಗೆ ವರ್ಗಾಯಿಸಿರುವುದು ಸಮಂಜಸ ವಲ್ಲ. ಬಂಧಿತರಲ್ಲಿ ಕರೊನಾ ಸೋಂಕು ಇದ್ದರೆ, ಜಿಲ್ಲೆಗೂ ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ರಾಮನಗರ ದಲ್ಲಿ ರೇಷ್ಮೆ ಮತ್ತು ಕೃಷಿ ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸಲು ರೈತರು ಗ್ರಾಹಕರು ಬರುತ್ತಾರೆ. ಹಾಗಾಗಿ ಸ್ಥಳಾಂತರ ಮಾಡಿರುವ ಆರೋಪಿಗಳನ್ನು ಮತ್ತೆ ಬೆಂಗಳೂರಿನ ಭಾಗಕ್ಕೆ ವರ್ಗಾಯಿಸಿ, ಹಸಿರುವಲಯ ರಾಮನಗರವನ್ನು ರಕ್ಷಿಸಬೇಕು. ಈ ವಿಷಯವನ್ನು ಜಿಲ್ಲಾಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಕೆ ವೇಳೆ ತಾಲೂಕು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಶಿವಮಾದು, ರಾಮನಗರ-ಚನ್ನಪಟ್ಟಣ ನಗರಾಭಿವೃಧ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಆರ್.ನಾಗರಾಜು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್, ಮಾಧ್ಯಮ ವಕ್ತಾರ ರುದ್ರದೇವರು ಇದ್ದರು.