ಪ್ರಚೋದನೆ ನೀಡುವ ಮಾತುಗಳು ಸರಿಯಲ್ಲ : ಪದ್ಮರಾಜ್.ಆರ್.

Padmaraj-R-Kudroli-KPCC-750x536
Published on


ಮಂಗಳೂರು : ಕೊಲೆ ಯಾರದ್ದೇ ನಡೆಯಲಿ ಅದು ದ.ಕ.ಜಿಲ್ಲೆಗೆ ಕುಂದು ತರುವ ವಿಚಾರ. ಯಾವುದೇ ಅಪರಾಧ ಹಿನ್ನೆಲೆ ಹೊಂದಿರದ ಅಮಾಯಕ ವ್ಯಕ್ತಿ ಅಬ್ದುಲ್ ರಹಿಮಾನ್ ಅವರನ್ನು ಜತೆಯಲ್ಲಿದ್ದವರೇ ಕೊಲೆ ಮಾಡಿದ್ದು ಖಂಡನೀಯ. ಈಗ ಜಿಲ್ಲೆಗೆ
ಉತ್ತಮ ಅಧಿಕಾರಿಗಳು ಬಂದಿದ್ದು, ಸ್ವಸ್ಥ ಸಮಾಜ ನಿರ್ಮಾಣ ಆಗುವ ಪೂರ್ಣ ಭರವಸೆ ಇದೆ. ರಾಜಕಾರಣಿಗಳು ಕೂಡಾ ಪ್ರಚೋದನೆ ನೀಡುವ ಮಾತುಗಳು ನಿಲ್ಲಿಸಬೇಕು ಎಂದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್.ಆರ್. ಪೂಜಾರಿ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಚೋದನೆಯ ಮಾತುಗಳಿಂದ ಆಗುವ ಅನಾಹುತಗಳ ಬಗ್ಗೆ ತಮ್ಮ ಕುಟುಂಬಕ್ಕೆ ಹೋಲಿಕೆ ಮಾಡಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಆಸ್ತಿಪಾಸ್ತಿ ನಷ್ಟದ ಜತೆಗೆ ಪ್ರಾಣಹಾನಿಯಾಗಿದೆ. ಸಿಎಂ ಸಿದ್ದರಾಮಯ್ಯರ ನಿರ್ದೇಶದನ ಮೇರೆಗೆ ಭೇಟಿ ನೀಡಿರುವ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವ ಕಾರ್ಯ ನಡೆಸಿದ್ದಾರೆ. ಆದರೆ ಶಾಸಕ ವೇದವ್ಯಾಸ ಕಾಮತ್ ಅವರು ಸರ್ಕಾರವನ್ನು ಟೀಕೆ ಮಾಡುವುದರಲ್ಲೇ ನಿರತರಾಗಿದ್ದಾರೆ. ಐದು ವರ್ಷಗಳ ಕಾಲ ಮನಪಾದಲ್ಲಿ ಬಿಜೆಪಿ ಆಡಳಿತ ನಡೆಸಿದೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಡೆಸಿದ ಅವೈಜ್ಞಾನಿಕ ಕಾಮಗಾರಿ ಕೃತಕ ನೆರೆ ಸೃಷ್ಟಿಗೆ ಕಾರಣವಾಗಿದೆ. ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡಿದ ವೇಳೆ ಮಳೆ ಹಾನಿ ಪರಿಹಾರ ಹಾಗೂ ಇತರ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಶಾಸಕರು ಚರ್ಚಿಸದೇ ಇರಲು ಕಾರಣ ಏನು ? ಶಾಸಕರು ರಾಜಕೀಯ ಬದಿಗಿರಿಸಿ ಸರ್ಕಾರದ ಒಳ್ಳೆಯ ಕಾರ್ಯವನ್ನು ಬೆಂಬಲಿಸಲಿ ಎಂದು ಪದ್ಮರಾಜ್ ಹೇಳಿದರು.
ಶಾಸಕ ಡಾ. ವೈ. ಭರತ್ ಶೆಟ್ಟಿಯವರು ಉಪ ಮುಖ್ಯಮಂತ್ರಿ ಡಿಕೆಶಿ ಹೇಳಿಕೆ ವಿರುದ್ಧ ಮಾತನಾಡಿದ್ದಾರೆ. ಡಿಕೆಶಿಯವರು ಇಲ್ಲಿನ ಪರಿಸ್ಥಿತಿಯಿಂದ ಬೇಸತ್ತು ಆಡಿರುವ ಮಾತೇ ಹೊರತು ಜಿಲ್ಲೆಯನ್ನು ಅವಮಾನಿಸುವ ಪ್ರಶ್ನೆಯೇ ಅವರ ಮಾತುಗಳಲ್ಲಿ ಇರಲಿಲ್ಲ. ಬಿಜೆಪಿ ಶಾಸಕರು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ಕೊಡಿಸುವಲ್ಲಿ ಸಹಕರಿಸಲಿ ಎಂದು ಅವರು ಹೇಳಿದರು.
ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾಂಗ್ರೆಸ್ ಪ್ರಮುಖರಾದ ಪ್ರಕಾಶ್ ಸಾಲಿಯಾನ್, ದಿನೇಶ್ ಮೂಳೂರು, ಅಪ್ಪಿ, ನೀರಜ್‌ಚಂದ್ರ ಪಾಲ್, ಟಿ. ಹೊನ್ನಯ್ಯ, ಪ್ರೇಮ್ ಬಳ್ಳಾಲ್‌ಬಾಗ್, ಸುಹಾನ್ ಆಳ್ವ, ಉಪಸ್ಥಿತರಿದ್ದರು.
....................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net