ರಾಮನ ಹುಟ್ಟಿನ ಸಾಕ್ಷ್ಯ ಒದಗಿಸಿದ್ದು ಸ್ಕಂದ ಪುರಾಣ : ವಕೀಲ ಒಡಿಯೂರು ಶ್ಯಾಮ ಭಟ್ ಮಾಹಿತಿ

New Project (20)
Published on

ಉಪ್ಪಿನಂಗಡಿ: ಶ್ರೀ ಸುಬ್ರಹ್ಮಣ್ಯ ದೇವನು ಜ್ಞಾನ ದೇವರಾಗಿದ್ದು, ರಾಮ ಎಲ್ಲಿ ಹುಟ್ಟಿದ ಎಂಬ ಪ್ರಶ್ನೆ ಸುಪ್ರೀಂ ಕೋರ್ಟ್‌ನ ಮುಂದೆ ಬಂದಾಗ ಅದಕ್ಕೆ ಉತ್ತರ ಒದಗಿಸಿದ್ದು, ಅಗಸ್ತ್ಯ ಮುನಿಗಳು ಮತ್ತು ಶ್ರೀ ಸುಬ್ರಹ್ಮಣ್ಯನ ನಡುವೆ ನಡೆದ ಸಂವಾದದ ಬಗ್ಗೆ ಸ್ಕಂದ ಪುರಾಣದಲ್ಲಿ ಇರುವ ಉಲ್ಲೇಖ ಎಂದು ಹಿರಿಯ ವಕೀಲ ಒಡಿಯೂರು ಶ್ಯಾಮ ಭಟ್ ತಿಳಿಸಿದರು.

ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮಕಲಶೋತ್ಸವದ 5ನೇ ದಿನವಾದ ಭಾನುವಾರ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.

ಆದಾಯ ತೆರಿಗೆ ನಿವೃತ್ತ ಅಧಿಕಾರಿ ಕೆ.ಎ.ಚಂದ್ರಕುಮಾರ್ ಮಾತನಾಡಿ, ತಾನು ಆಡಿ ಬೆಳೆದ ಪರಿಸರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ದೇವಾಲಯವೊಂದು ಪುನಃನಿರ್ಮಾಣಗೊಂಡು ಊರಿಗೆ ಸುಭಿಕ್ಷೆಯನ್ನು ನೀಡಿದೆ ಎಂದರು.

ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿ ಮಾತನಾಡಿ, ಪದಾಳದಲ್ಲಿ ದೇವರ ಸಾನ್ನಿಧ್ಯ ನಂದಾದೀಪದಂತೆ ಬೆಳಗಿ, ಎಲ್ಲರಿಗೂ ಸುಭಿಕ್ಷೆಯನ್ನು ಅನುಗ್ರಹಿಸಲಿ ಎಂದರು.

ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಮಾತನಾಡಿ, ನಂಬಿಕೆ, ಆಚರಣೆಗಳಿಗೆ ಭಾರತ ದೇಶದಲ್ಲಿ ಪ್ರಾಧಾನ್ಯ ಇದ್ದು, ನಾವೆಲ್ಲ ದೇವರ ಮಕ್ಕಳಾಗಿದ್ದೇವೆ. ಆದ್ದರಿಂದ ಜಾತಿ- ಮತಗಳನ್ನು ಬಿಟ್ಟು ನಾವೆಲ್ಲ ಅನ್ಯೋನ್ಯವಾಗಿ ಬಾಳೋಣ. ದೇವಾಲಯದ ಕೆಲಸವೆಂದರೆ ತೋರ್ಪಡಿಕೆಗಾಗಿ ಬೇಡ. ಸ್ವಾರ್ಥ, ಕಲ್ಮಶವಿಲ್ಲದೆ ಮಾಡುವ ಸೇವೆಯೇ ದೇವರಿಗೆ ಪ್ರಧಾನ ಎಂದರು.

ಕನಕ ಪ್ರಶಸ್ತಿ ಪುರಸ್ಕೃತ ಡಾ.ವಸಂತ ಕುಮಾರ ತಾಳ್ತಜೆ ಅವರನ್ನು ಸನ್ಮಾನಿಸಲಾಯಿತು. ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಉದಯ ಶಂಕರ ಭಟ್ಟ ಅಧ್ಯಕ್ಷತೆ ವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ನಟೇಶ್ ಪೂಜಾರಿ ಪುಳಿತ್ತಡಿ, ದೇವಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ ಉಪಸ್ಥಿತರಿದ್ದರು.

ಕುಮಾರಿ ವಿಹಾ ಪ್ರಸನ್ನ ಪೆರಿಯಡ್ಕ ಪ್ರಾರ್ಥಿಸಿದರು. ಶಿಕ್ಷಕ ಶ್ರೀಧರ ಭಟ್ ಸ್ವಾಗತಿಸಿದರು. ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಖರ ಗೌಂಡತ್ತಿಗೆ ವಂದಿಸಿದರು. ಶಿಕ್ಷಕಿ ವಿಮಲಾ ತೇಜಾಕ್ಷಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net